ಆಹಾರ ಮೇಳದ ಲಾಂಛನ ಬಿಡುಗಡೆ | Mysuru Dasara 2019

ಆಹಾರ ಮೇಳದ ಲಾಂಛನ ಬಿಡುಗಡೆ

ಮೈಸೂರು, ಆ.24:- ಮೈಸೂರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಶ್ವವಿಖ್ಯಾತ ದಸರಾ ಪ್ರಯುಕ್ತ ಆಯೋಜಿಸಲಾಗುವ ಆಹಾರಮೇಳದ ಲಾಂಛನವನ್ನು ಜಿಲ್ಲಾಧಿಕಾರಿ ಡಿ.ರಂದೀಪ್ ಬಿಡುಗಡೆಗೊಳಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳೂ ಆಗಿರುವ ಆಹಾರ ಮೇಳದ ಉಪ ವಿಶೇಷಾಧಿಕಾರಿ ಪಿ. ಶಿವಶಂಕರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಉಪನಿರ್ದೇಶಕ ಡಾ. ರಾಮೇಶ್ವರಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್. ರಾಜು ಮತ್ತಿತರರು ಉಪಸ್ಥಿತರಿದ್ದರು.

ಆನೆಯ ಮೇಲೆ ತಿಂಡಿಗಳನ್ನು ಪೇರಿಸಿಟ್ಟ ಚಿತ್ರ ಲಾಂಛನವಾಗಿದೆ. ಆಹಾರ ಮೇಳ ದಸರಾದ ಪ್ರಮುಖ ಆಕರ್ಷಣೆಯಾಗಿದ್ದು, ಇಲ್ಲಿ ಸಿಗುವ ವಿವಿಧ ಬಗೆಯ ಭಕ್ಷ್ಯಗಳನ್ನು ಸವಿಯಲೋಸುಗವೇ ಆಹಾರಪ್ರಿಯರು ತಂಡೋಪತಂಡವಾಗಿ ಬರುತ್ತಾರೆ. ಅದರಿಂದ ನಗರದ ಮೂರು ಕಡೆಗಳಲ್ಲಿ ಈ ಬಾರಿ ಆಹಾರ ಮೇಳವನ್ನು ಆಯೋಜಿಸಲಾಗಿದೆ.

ಆಹಾರ ಮೇಳ ನಗರದ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಲಲಿತಮಹಲ್ ಪಕ್ಕದಲ್ಲಿರುವ ಮೈದಾನ ಮತ್ತು ಸಾತಗಳ್ಳಿ ಡಿಪೋ ಬಳಿ ನಡೆಯಲಿದ್ದು, ಅಲ್ಲಿಯೇ ವಾಹನಗಳ ಪಾರ್ಕಿಂಗ್ ಗೂ ವ್ಯವಸ್ಥೆ ಮಾಡಲಾಗಿದೆ.

ಕಳೆದ ಬಾರಿ ಮೈಸೂರು ಪ್ರಾಂತ್ಯದ ಬುಡಕಟ್ಟು ಜನಾಂಗದವರು ಮಾತ್ರ ಪಾಲ್ಗೊಂಡಿದ್ದರು. ಆದರೆ ಈ ಬಾರಿ  ಮಡಿಕೇರಿ, ಚಾಮರಾಜನಗರ ಸೇರಿದಂತೆ ವಿವಿಧೆಡೆಗಳ ಬುಡಕಟ್ಟು ಹಾಡಿಗಳಿಂದ ಆಗಮಿಸಿ ನೆಚ್ಚಿನ ಆಹಾರ ತಯಾರಿಸಿಕೊಡಲಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಆಹಾರ ಪ್ರಿಯರು ಮನಸೋ ಇಚ್ಛೆ ಆಹಾರಗಳನ್ನು ಸವಿಯಬಹುದಾಗಿದೆ.