ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಸ್ಟರ್ ಬಿಡುಗಡೆ | Mysuru Dasara 2019

ಮೈಸೂರು ಸೆ.21(ಕರ್ನಾಟಕ ವಾರ್ತೆ):- ಈ ಬಾರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಲವಾರು ಖ್ಯಾತ ಕಲಾವಿದರು ಪಾಲ್ಗೊಂಡು ಮನರಂಜನೆ ನೀಡಲಿದ್ದಾರೆ ಎಂದು ವಸತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಸೆಪ್ಟೆಂಬರ್ 29 ರಿಂದ ಅರಮನೆ ವೇದಿಕೆ ಸೇರಿದಂತೆ ಸುಮಾರು ಎಂಟು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಹೊಸ ರೀತಿಯ ಸಂಗೀತ ಕಾರ್ಯಕ್ರಮಗಳನ್ನು ಈ ಬಾರಿ ನೋಡಬಹುದು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆ ಆವರಣ, ಕಲಾಮಂದಿರ, ಜಗನ್ಮೋಹನ ಅರಮನೆ, ಗಾನ ಭಾರತಿ, ಚಿಕ್ಕಗಡಿಯಾರ, ಪುರಭವನ ಹಾಗೂ ಕಿರು ರಂಗಮಂದಿರದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಎಲ್ಲಾ ವೇದಿಕೆಯ ಸಂಪೂರ್ಣ ಕಾರ್ಯಕ್ರಮಗಳ ಮಾಹಿತಿಯನ್ನು ಒಂದು ಕಿರು ಪುಸ್ತಕದ ಮೂಲಕ ಸೆಪ್ಟೆಂಬರ್ 26 ರಂದು ಬಿಡುಗಡೆ ಮಾಡಲಾಗುವುದು ಎಂದರು.
ಅರಮನೆ ವೇದಿಕೆಯಲ್ಲಿ ಸೆಪ್ಟೆಂಬರ್ 29 ರಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮೈಸೂರಿನ ಸಂಗೀತ ವಿದ್ವಾನ್ ಪ್ರೊ.ಬಿ.ಎಸ್ ವಿಜಯ ರಾಘವನ್ ಅವರಿಗೆ 2019ನೇ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಲ್.ನಾಗೇಂದ್ರ, ಸಾಂಸ್ಕೃತಿಕ ದಸರಾ ಉಪ ಸಮಿತಿಯ ಅಧ್ಯಕ್ಷರಾದ ಫಣೀಶ್ ಎನ್.ವಿ, ಉಪಾಧ್ಯಕ್ಷರಾದ ಸೋಮಸುಂದರ್, ಪುನೀತ್, ವಿನಯ್ ಕುಮಾರ್, ಉಪ ವಿಶೇಷಾಧಿಕಾರಿ ಕೆ.ಜ್ಯೋತಿ, ಕಾರ್ಯಾಧ್ಯಕ್ಷ ವಿ.ಎನ್ ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಹೆಚ್.ಚೆನ್ನಪ್ಪ ಹಾಗೂ ಸಾಂಸ್ಕೃತಿಕ ಉಪ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.