ಬಂಡೀಪುರ | Mysuru Dasara 2019

ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಒಂದು ಗುಂಡ್ಲು ಗ್ರಾಮ. ಪೇಟೆಯ ದಕ್ಷಿಣಕ್ಕೆ 19 ಕಿಮೀ ದೂರದಲ್ಲಿದೆ. ಜನಸಂಖ್ಯೆ 371 (1971). ಪ್ರಾಥಮಿಕ ಶಾಲೆ, ಅಂಚೆ, ದೂರವಾಣಿ ಮತ್ತು ವಿದ್ಯುತ್ ಸೌಲಭ್ಯಗಳಿವೆ. ಬಂಡೀಪುರ ವನ್ಯಮೃಗ ಸಂರಕ್ಷಣಾ ಕೇಂದ್ರದಿಂದಾಗಿ ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿದೆ. ಬಂಡೀಪುರ ವನ್ಯಮೃಗ ಸಂರಕ್ಷಣಾ ಕೇಂದ್ರ ಸುಮಾರು 57 ಚಕಿಮೀ ವಿಸ್ತಾರವಾಗಿದೆ. ಇದು 1941 ರಿಂದ ವೇಣುಗೋಪಾಲ ವನ್ಯಮೃಗ ಉದ್ಯಾನವನದ ಒಂದು ಭಾಗವಾಗಿ ಪರಿಗಣಿತವಾಗಿದೆ.

ಬೆಂಗಳೂರು-ನೀಲಗಿರಿ ರಸ್ತೆಯಲ್ಲಿ ಮೈಸೂರು ನಗರದ ದಕ್ಷಿಣಕ್ಕೆ 80 ಕಿಮೀ ದೂರದಲ್ಲಿದ್ದು, ಸಮುದ್ರಮಟ್ಟಕ್ಕಿಂತ 1,022 ರಿಂದ 1,454 ಮೀ ಎತ್ತರದಲ್ಲಿದೆ. ವರ್ಷದ ಸರಾಸರಿ ಮಳೆ 890 ಮಿಮಿ, ಉಷ್ಣ 110-380 ಸೆಲ್ಸಿಯಸ್ ಇರುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅಧಿಕ ಉಷ್ಣತೆ. ಮಳೆ ಕಡಿಮೆಯಾದ್ದರಿಂದ ಬಂಡೀಪುರದ ಕಾಡು ದಟ್ಟವಾಗಿಲ್ಲ. ಸ್ವಾಭಾವಿಕವಾಗಿ ಎಲೆ ಉದುರುವ ಮರದ ಕಾಡು ಇಲ್ಲಿಯ ಮುಖ್ಯ ಸಸ್ಯವರ್ಗ. ಸವನ್ನ ಕಾಡಿನಲ್ಲಿರುವ ಹಾಗೆ ಇಲ್ಲಿ ತೇಗ, ಮತ್ತಿ, ದಿಂಡಲು, ಹೊನ್ನೆ, ಜಾಲಾರಿ, ಯತಿಗ, ಬೀಟೆ, ತಡಸಲು, ನೇರಳೆ, ಬೂರುಗ ಮತ್ತು ತಾರೆ ಮರಗಳು ಅಲ್ಲಲ್ಲಿ ಗುಂಪಾಗಿ ಬೆಳೆದು ಕಾಡಿನ ಬಹುಭಾಗವನ್ನು ಆಕ್ರಮಿಸಿವೆ. ಮರದ ಗುಂಪುಗಳ ಮಧ್ಯಭಾಗದಲ್ಲಿ ಅಖಂಡವಾಗಿ ಬೆಳೆದಿರುವ ಆನೆಹುಲ್ಲನ್ನು ಕಾಣಬಹುದು. ಇಲ್ಲಿ ನೀರಿನ ಸಣ್ಣ ಬುಗ್ಗೆಗಳು ಹೇರಳವಾಗಿವೆ. ನೈರುತ್ಯ ಶೀತಮಾರುತ ಬರುವ ಮುನ್ನವೇ ಅವು ಬತ್ತಿಹೋಗುತ್ತವೆ. ಸದಾ ನೀರು ತುಂಬಿ ಹರಿಯುವ ಕೆಕ್ಕನ ಹಳ್ಳವೇ ಕಾಡಿನ ಮೃಗಗಳ ನೀರಿಗೆ ಆಧಾರ, ಈ ನದಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳನ್ನು ಬೇರ್ಪಡಿಸುವ ಗಡಿರೇಖೆಯಂತಿದೆ. ಕಾಡಿನಲ್ಲಿರುವ ಕೆಸರುಗುಂಡಿಗಳು ಕಾಡಾನೆಗಳಿಗೆ ಬೇಸಗೆಯಲ್ಲಿ ಮರಳು ಗಾಡಿನ ಓಯಸಿಸ್ ಇದ್ದಹಾಗೆ. ಆದುದರಿಂದಲೇ ಕಾಡಾನೆಗಳು ಬಂಡೀಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತವೆ. ಕೆಸರುಗುಂಡಿಯ ಮತ್ತು ಸಣ್ಣ ಝರಿಗಳ ಅಂಚಿನಲ್ಲಿ ದಟ್ಟವಾಗಿ ಬೆಳೆದಿರುವ ಬಿದಿರುಮೆಳೆ ಸಣ್ಣ ಪ್ರಾಣಿಗಳಿಗೆ ವಾಸಸ್ಥಾನ. ವನ್ಯಮೃಗಗಳು ನೆಕ್ಕಲು ಬೇಕಾಗುವ ಉಪ್ಪು ಊರಿದ ನೆಲ ಈ ಕಾಡಿನಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ. ನಾಲ್ಕನೆಯ ಪಂಚವಾಷರ್ಿಕ ಯೋಜನೆಯ ಅಂತಿಮ ವರ್ಷ ಮತ್ತು ಐದನೆಯ ಪಂಚವಾರ್ಷಿಕ ಪೂರ್ಣಾವಧಿಗೆ ಹಬ್ಬುವ ಹುಲಿರಕ್ಷಣೆ ಯೋಜನೆಯ ಕಾರ್ಯಕ್ರಮದಲ್ಲಿ ಭಾರತದ ಒಂಬತ್ತು ಹುಲಿ ರಕ್ಷಣಾಕೇಂದ್ರಗಳಲ್ಲಿ ಬಂಡೀಪುರ ಅಭಯಾರಣ್ಯವೂ ಸೇರಿದೆ. ಬಂಡೀಪುರದ ವನ್ಯ ಮೃಗಗಳಲ್ಲಿ ಸಾಮಾನ್ಯವಾಗಿ ನಾವು ಕಾಣುವುದು ಆನೆ, ಕಾಡು ಕೋಣ, ಚುಕ್ಕೆಜಿಂಕೆ, ಬಗಳುವ ಜಿಂಕೆ, ಕಾಡುಹಂದಿ, ಕಾಡುನಾಯಿ, ನರಿ, ಮುಂಗುಸಿ, ಕಪ್ಪು ಮುಖದ ಮುಸುವ. ಆಗಾಗ ಕಾಣಿಸಿಕೊಳ್ಳುವ ಪ್ರಾಣಿಗಳಲ್ಲಿ ಹುಲಿ, ಚಿರತೆ, ಕಾಡುಕುರಿ, ಕರಡಿ, ಕಾಡುಬೆಕ್ಕು ಮುಖ್ಯವಾದವು. ಜೊತೆಗೆ ನವಿಲು, ಹಸಿರು ಪಾರಿವಾಳ, ಮುಳ್ಳುಹಂದಿ, ಹೆಬ್ಬಾವು, ನಾಗರಹಾವು, ಹಸಿರು ಹಾವು, ಮಂಡಲದ ಹಾವು ಮೊದಲಾದವನ್ನು ಕಾಣಬಹುದು. ವನ್ಯಮೃಗಗಳನ್ನು ನೋಡುವುದಕ್ಕೆ ಮಾರ್ಚಿಯಿಂದ ಆಗಸ್ಟ್ ತಿಂಗಳುಗಳು ಒಳ್ಳೆಯ ಕಾಲ. ಪ್ರವಾಸೀ ಕೇಂದ್ರವಾಗಿ ಅಭಿವೃದ್ಧಿಹೊಂದಿರುವ ಬಂಡೀಪುರದಲ್ಲಿ ತಂಗಲು ಪ್ರವಾಸೀ ಮಂದಿರ ಇದೆ. ವನ್ಯಮೃಗಗಳನ್ನು ನೋಡಲು ಸಾರಿಗೆ ಮತ್ತು ಅರಣ್ಯ ಅಧಿಕಾರಿಗಳ ಸಹಾಯ ದೊರಕುತ್ತದೆ.

ವಿಳಾಸ:

ಬಂಡೀಪುರ ರಾಷ್ಟ್ರೀಯ ಉದ್ಯಾನ, ಬಂಡೀಪುರ, ಕರ್ನಾಟಕ