ದಸರಾ ಕ್ರೀಡೆ | Mysuru Dasara 2019

ದಸರಾ ಕ್ರೀಡಾಕೂಟ: ಅಕ್ಟೋಬರ್ 1 ರಂದು ಪಿ.ವಿ ಸಿಂಧು ಅವರಿಂದ ಉದ್ಘಾಟನೆ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಸೆಪ್ಟೆಂಬರ್ 29 ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನಾ ವೇಳೆ ಮುಖ್ಯಮಂತ್ರಿಗಳು ದಸರಾ ಕ್ರೀಡಾಜ್ಯೋತಿ ಉದ್ಘಾಟನೆ ಮಾಡುವ ಮೂಲಕ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ನೀಡುವರು ಹಾಗೂ ಅಕ್ಟೋಬರ್ 1 ರಂದು ಸಂಜೆ 4 ಗಂಟೆಗೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು ದಸರಾ ಕ್ರೀಡಾಕೂಟ ಉದ್ಘಾಟನೆ ಮಾಡಲಿದ್ದಾರೆ.

ದಸರಾ ಕ್ರೀಡಾ ಉಪಸಮಿತಿಯ ವತಿಯಿಂದ ದಿನಾಂಕ 29-09-2019 ರಿಂದ 06-10-2019 ರವರೆಗೆ ರಾಜ್ಯ ದಸರಾ ಕ್ರೀಡಾಕೂಟವನ್ನು ಸುಮಾರು 30 ಕ್ರೀಡೆಗಳಲ್ಲಿ ಮೈಸೂರಿನ ವಿವಿಧ ಕ್ರೀಡಾ ಅಂಕಣಗಳಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 5000 ದಿಂದ 6000 ಪ್ರತಿಭಾನ್ವಿತ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.

ಕ್ರೀಡಾ ಜ್ಯೋತಿಯು ಉದ್ಘಾಟನೆಗೊಂಡ ದಿನದಿಂದ ದಸರಾ ಕ್ರೀಡಾಕೂಟ ಉದ್ಘಾಟನೆಗೊಳ್ಳುವ ದಿನದವರೆಗೆ ದಿನಾಂಕ 29-09-2019 ಮತ್ತು 30-09-2019 ರಂದು ಮೈಸೂರು ಜಿಲ್ಲೆಯ ಟಿ.ನರಸೀಪುರ, ನಂಜನಗೂಡು, ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ ಮತ್ತು ಹುಣಸೂರು ತಾಲ್ಲೂಕುಗಳಲ್ಲಿ ಸಂಚರಿಸಿ ಹಾಗೂ ದಿನಾಂಕ 01-10-2019 ರಂದು ಮೈಸೂರು ಜಿಲ್ಲೆಗೆ ಆಗಮಿಸಿ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ನಂತರ ಅದೇ ದಿನ ಸಂಜೆ 4.30 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯ ದಸರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಕ್ರೀಡಾಜ್ಯೋತಿಯನ್ನು ಜ್ಯೋತಿ ಸ್ಥಂಭದಲ್ಲಿ ಸಮಾವೇಶಗೊಳಿಸಲಾಗುವುದು.

ಕ್ರೀಡಾಕೂಟವನ್ನು ಚಾಮುಂಡಿ ವಿಹಾರ ಕ್ರೀಡಾಂಗಣ, ಮೈಸೂರು ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ ಒಳಾಂಗಣ, ಕ್ರೀಡಾಂಗಣ, ಮಹಾರಾಜ ಕಾಲೇಜು, ಯುವರಾಜ ಕಾಲೇಜು ಒಳಾಂಗಣ ಕ್ರೀಡಾಂಗಣ, ಮೈಸೂರು ಟೆನ್ನಿಸ್ ಕ್ಲಬ್, ಚಾಮರಾಜಪುರಂ, ಎನ್.ಐ.ಇ. ಇಂಜಿನಿಯರಿಂಗ್ ಕಾಲೇಜು, ಜೆ.ಸಿ.ಇ. ಇಂಜಿನಿಯರಿಂಗ್ ಒಳಾಂಗಣ ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗಿದೆ.

ರಾಜ್ಯ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಈ ಹಿಂದೆ ಛತ್ರಗಳಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿತ್ತು. ಈ ಬಾರಿ ಸ್ಪರ್ಧಿಸುವ ರಾಜ್ಯದ ಎಲ್ಲಾ ಜಿಲ್ಲೆಗಳ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ವಸತಿ ಗೃಹ/ಹೋಟೆಲ್‍ಗಳಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ದಿನಾಂಕ : 30-09-2019 ರ ರಾತ್ರಿಯಿಂದ 05-10-2019 ಬೆಳಗಿನವರೆಗೆ ಶ್ರೀ. ನಂಜರಾಜ ಬಹದ್ದೂರ್ ಛತ್ರ, ವಿನೋಬಾ ರಸ್ತೆ, ಮೈಸೂರು. ಇಲ್ಲಿ ಊಟೋಪಹಾರ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

ಕ್ರೀಡಾಕೂಟ ನಡೆಯುವ ಎಲ್ಲಾ ಅಂಕಣಗಳಲ್ಲಿ, ಊಟ ಮತ್ತು ವಸತಿ ಸ್ಥಳಗಳಲ್ಲಿ ಕುಡಿಯುವ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಊಟೋಪಹಾರದ ಸ್ಥಳದಿಂದ, ವಸತಿ ಸ್ಥಳಗಳಿಂದ, ಸ್ಪರ್ಧೆ ನಡೆಯುವ ವಿವಿಧ ಅಂಕಣಗಳಿಗೆ ಹೋಗಿ ಬರುವ ಸ್ಥಳೀಯ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರಗಳನ್ನು ಒದಗಿಸಲಾಗುವುದು.

ದಿನಾಂಕ: 27-09-2019 ರಿಂದ 08-10-2019 ರವರೆಗೆ ಈ ಕೆಳಕಂಡಂತೆ ಸಾಹಸ ಕ್ರೀಡೆಗಳನ್ನು ಸಂಘಟಿಸಲಾಗುತ್ತಿದ್ದು, ದಿನಾಂಕ 29-09-2019 ರ ಮಧ್ಯಾಹ್ನ 12.30 ಗಂಟೆಗೆ ಕೆ.ಆರ್.ಎಸ್. ಹಿನ್ನೀರು, ಹೊಸ ಹುಂಡುವಾರಿ (ಬ್ಲೂ ಲಗೂನ್) ಇಲ್ಲಿ ಏರ್ಪಡಿಸಲಾಗಿದ್ದು, ಉದ್ಘಾಟನೆಯನ್ನು ಸನ್ಮಾನ್ಯಶ್ರೀ ವಿ. ಸೋಮಣ್ಣ, ಮಾನ್ಯ ವಸತಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಇವರು, ಚಾಲನೆಯನ್ನು ಶ್ರೀ ಪ್ರತಾಪ್ ಸಿಂಹ, ಮಾನ್ಯ ಸಂಸದರು, ಮೈಸೂರು ಲೋಕಸಭಾ ಕ್ಷೇತ್ರ ಇವರು, ಅಧ್ಯಕ್ಷತೆಯನ್ನು ಶ್ರೀ ಜಿ.ಟಿ. ದೇವೇಗೌಡ, ಮಾನ್ಯ ಶಾಸಕರು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವಹಿಸಲಿದ್ದು, ಈ ಸಂದರ್ಭದಲ್ಲಿ ಮಾನ್ಯ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರುಗಳು ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಅದೇ ದಿನ ಸಂಜೆ 4.45 ಗಂಟೆಗೆ ಕುಪ್ಪಣ್ಣ ಪಾರ್ಕ್, ಮೈಸೂರು ಇಲ್ಲಿ ಸದೃಢ ಭಾರತ ಮತ್ತು ಮಕ್ಕಳ ಕ್ರೀಡಾ ರಂಗ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಉದ್ಘಾಟನೆಯನ್ನು ಸನ್ಮಾನ್ಯಶ್ರೀ ಬಿ.ಎಸ್. ಯಡಿಯೂರಪ್ಪ ಇವರು, ವಾಲ್ ಕ್ಲೈಂಬಿಂಗ್ ಉದ್ಘಾಟನೆಯನ್ನು ಸನ್ಮಾನ್ಯಶ್ರೀ ವಿ. ಸೋಮಣ್ಣ, ಮಾನ್ಯ ವಸತಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಇವರು, ಸಂದೇಶವನ್ನು ಶ್ರೀ ಪ್ರತಾಪ್ ಸಿಂಹ, ಮಾನ್ಯ ಸಂಸದರು, ಮೈಸೂರು ಲೋಕಸಭಾ ಕ್ಷೇತ್ರ ಇವರು ಅಧ್ಯಕ್ಷತೆಯನ್ನು ಶ್ರೀ ನಾಗೇಂದ್ರ ಎಲ್, ಮಾನ್ಯ ಶಾಸಕರು ಚಾಮರಾಜ ವಿಧಾನಸಭಾ ಕ್ಷೇತ್ರ ಇವರು ವಹಿಸಲಿದ್ದು, ಈ ಸಂದರ್ಭದಲ್ಲಿ ಮಾನ್ಯ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರುಗಳು ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಸೈಕ್ಲೋಥಾನ್ ಸ್ಪರ್ಧೆಯನ್ನು ದಿನಾಂಕ 02-10-2019 ರಂದು ಬೆಳಿಗ್ಗೆ 6.30 ಗಂಟೆಗೆ ಆಯೋಜಿಸಲಾಗಿದ್ದು, ಪುರುಷರಿಗೆ 100 ಕಿ.ಮೀ ಅದರ ಮಾರ್ಗಸೂಚಿಯು, ಬನ್ನೂರು ಜಂಕ್ಷನ್‍ನಿಂದ ಪ್ರಾರಂಭವಾಗಿ-ರಿಂಗ್ ರಸ್ತೆ ಎಡಕ್ಕೆ ತಿರುಗಿ-ಗರ್ಗೇಶ್ವರಿಯಿಂದ-ಟಿ.ನರಸೀಪುರ ಮೂಲಕ ಸಾಗಿ -ಮೂಗುರಿನಿಂದ 5 ಕಿ.ಮೀ ಸಂಚರಿಸಿ ಮತ್ತೆ ಹಿಂತಿರುಗಿ-ಮೂಗುರು-ಟಿ.ನರಸೀಪುರ ರಿಂಗ್ ರಸ್ತೆ ಎಡಕ್ಕೆ ತಿರುಗಿ-ಲಲಿತಾದ್ರಿಪುರ ಮೂಲಕ- ಜೆ.ಎಸ್.ಎಸ್. ಪ್ರಕೃತಿ ಚಿಕಿತ್ಸಾಲಯದ ಮುಂಭಾಗದಿಂದ ಎಡಕ್ಕೆ ತಿರುಗಿ-ಹೈವಾಕ್ ಎಡಕ್ಕೆ ತಿರುಗಿ –ಚಾಮುಂಡಿ ಬೆಟ್ಟದ ದೇವಿ ಕೆರೆಯಲ್ಲಿ ಮುಕ್ತಾಗೊಳ್ಳಲಿದೆ.

ಮಹಿಳೆಯರು 50 ಕಿ.ಮೀ ಮೂಗುರು ಕೊಳ್ಳೆಗಾಲ ಮಧ್ಯದ ವೃತ್ತದಿಂದ ಪ್ರಾರಂಭವಾಗಿ- ಮೂಗುರು-ಗರ್ಗೇಶ್ವರಿ ಮೂಲಕ-ಟಿ.ನರಸೀಪುರ ರಿಂಗ್ ರಸ್ತೆ ಎಡಕ್ಕೆ ತಿರುಗಿ-ಲಲಿತಾದ್ರಿಪುರ ಮೂಲಕ- ಜೆ.ಎಸ್.ಎಸ್. ಪ್ರಕೃತಿ ಚಿಕಿತ್ಸಾಲಯದ ಮುಂಭಾಗದಿಂದ ಎಡಕ್ಕೆ ತಿರುಗಿ-ಹೈವಾಕ್ ಮುಂಭಾಗದಿಂದ –ಚಾಮುಂಡಿ ಬೆಟ್ಟದ ದೇವಿ ಕೆರೆಯಲ್ಲಿ ಮುಕ್ತಾಗೊಳ್ಳಲಿದೆ.

ಸೈಕ್ಲೋಥಾನ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈ ಕೆಳಗಿನ ಬಹುಮಾನಗಳನ್ನು ವಿತರಿಸಲಾಗುವುದು 

  • ಪ್ರಥಮ ರೂ.30,000/-,
  • ದ್ವಿತೀಯ 25,000/-,
  • ತೃತೀಯ 20,000/-,
  • ನಾಲ್ಕನೇ 15,000/-,
  • ಐದನೇ 10,000/-
  • ಆರನೇ ವಿಜೇತರಿಗೆ 5000/-

ಸ್ಥಳ :

ಚಾಮುಂಡಿ ವಿಹಾರ್ ಕ್ರೀಡಾಂಗಣ

ಗೂಗಲ್ ಮ್ಯಾಪ್

ದಿನಾಂಕ :

ಸೆಪ್ಟೆಂಬರ್ 29 ರಿಂದ

ಗ್ಯಾಲರಿ