ಶ್ರೀರಂಗಪಟ್ಟಣ | Mysuru Dasara 2019

ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಉತ್ತರ-ದಕ್ಷಿಣ ಅಗಲವಾಗಿದ್ದು ಪೂರ್ವ-ಪಶ್ಚಿಮ ಕಿರಿದಾಗುತ್ತ ಹೋಗುವ ಈ ತಾಲ್ಲೂಕಿನ ಪೂರ್ವ ಮತ್ತು ಆಗ್ನೇಯದಲ್ಲಿ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕೂ ಪಶ್ಚಿಮ, ನೈಋತ್ಯ ಮತ್ತು ದಕ್ಷಿಣದಲ್ಲಿ ಅನುಕ್ರಮವಾಗಿ ಮೈಸೂರು ತಾಲ್ಲೂಕು, ಉತ್ತರದಲ್ಲಿ ಪಾಂಡವಪುರ ಮತ್ತು ಮಂಡ್ಯ ತಾಲ್ಲೂಕುಗಳು ಇವೆ.

ಅರಕೆರೆ, ಬೆಳಗೊಳ, ಶ್ರೀರಂಗಪಟ್ಟಣ ಮತ್ತು ಕೆ. ಶೆಟ್ಟಿಹಳ್ಳಿ ಇದರ ಹೋಬಳಿಗಳು. ೯೭ ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ ೩೪೬.೭ ಚ.ಕಿಮೀ. ಜನಸಂಖ್ಯೆ ೧೬೨,೬೮೨. ತಾಲ್ಲೂಕಿನಲ್ಲಿ ಹುಲಿಕೆರೆ-ಕರಿಘಟ್ಟ ಶ್ರೇಣಿಗೆ ಸೇರಿದ ಕರಿಘಟ್ಟ ಬೆಟ್ಟ ಶ್ರೀರಂಗಪಟ್ಟಣದ ಹತ್ತಿರವಿದೆ. ಈ ಬೆಟ್ಟದ ಬುಡದಲ್ಲೇ ಲೋಕ ಪಾವನಿ ಬಾಬುರಾಯನಕೊಪ್ಪಲು ಬಳಿ ಕಾವೇರಿ ನದಿಯನ್ನು ಸೇರಿಕೊಳ್ಳು ವುದು. ತಾಲ್ಲೂಕಿನ ಮುಖ್ಯನದಿ ಕಾವೇರಿ. ಕೃಷ್ಣರಾಜಸಾಗರದ ಮೇಲುಗಡೆ ಹೇಮಾವತಿಯನ್ನು ಕೂಡಿಕೊಂಡು ಈ ನದಿ ಶ್ರೀರಂಗಪಟ್ಟಣ ತಾಲ್ಲೂಕನ್ನು ಪ್ರವೇಶಿಸುತ್ತದೆ. ತಾಲ್ಲೂಕಿನ ಉತ್ತರದಲ್ಲಿ ಸ್ವಲ್ಪ ದೂರ ಪಾಂಡವಪುರ ತಾಲ್ಲೂಕನ್ನು ಶ್ರೀರಂಗಪಟ್ಟಣ ತಾಲ್ಲೂಕಿನಿಂದ ಬೇರ್ಪಡಿಸಿ ಪೂರ್ವಾಭಿಮು ಖವಾಗಿ ಹರಿಯುವುದು.

ಮುಂದೆ ಮಹದೇವಪುರದ ಬಳಿ ಆಗ್ನೇಯಾಭಿ ಮುಖವಾಗಿ ಹರಿದು ತಿರುಮಕೂಡಲು ನರಸೀಪುರ ತಾಲ್ಲೂಕನ್ನು ಪ್ರವೇಶಿಸುವುದು. ಉತ್ತಮ ಹವಾಮಾನವಿರುವ ಈ ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ ೫೪೭.೪೦ ಮಿಮೀ. ಕಾವೇರಿ, ಲೋಕಪಾವನಿ ಈ ನದಿಗಳ ನೀರನ್ನು ತಾಲ್ಲೂಕಿನಲ್ಲಿ ಬಳಸಿಕೊಳ್ಳುತ್ತಿರುವುದಲ್ಲದೆ ವ್ಯವಸಾಯಕ್ಕೆ ಸಾಕಷ್ಟು ಜಲ ಪೂರೈಕೆ ಮಾಡುವ ವಿರಜಾ ನದಿ ಕಾಲುವೆ, ದೇವರಾಯ ಕಾಲುವೆ, ರಾಮಸ್ವಾಮಿ ಮತ್ತು ಚಿಕ್ಕದೇವರಾಯಸಾಗರ ಕಾಲುವೆಗಳು ತಾಲ್ಲೂಕಿನಲ್ಲಿ ಹರಡಿವೆ. ಇತ್ತೀಚೆಗೆ ಯೋಜಿಸಲಾಗಿರುವ ಕರಿಘಟ್ಟ ನೀರೆತ್ತುಗ ಯೋಜನೆಯಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಸಾವಿರಾರು ಎಕರೆಗಳಿಗೆ ಜಲ ಪೂರೈಸಲಾಗುತ್ತಿದೆ. ಜಲ ಸಮೃದ್ಧಿಯನ್ನು ಹೊಂದಿರುವ ಈ ತಾಲ್ಲೂಕು ಫಲವತ್ತಾದ ಕೆಂಪು ಜೇಡಿಮಿಶ್ರಿತ ಮಣ್ಣಿನಿಂದ ಕೂಡಿದೆ.

ಈ ತಾಲ್ಲೂಕಿನ ಮುಖ್ಯ ಬೆಳೆಗಳು ಬತ್ತ, ಕಬ್ಬು, ರಾಗಿ, ಜೊತೆಗೆ ಜೋಳ, ನೆಲಗಡಲೆ, ವಿವಿಧ ದ್ವಿದಳ ಧಾನ್ಯಗಳು. ಹರಳು ಬೆಳೆಯುತ್ತಾರೆ. ತೋಟಗಳಲ್ಲಿ ತೆಂಗು ಮತ್ತು ವಿವಿಧ ಫಲಗಳನ್ನು ಬೆಳೆಯುವುದುಂಟು. ವ್ಯವಸಾಯದ ಜೊತೆಗೆ ಪಶುಪಾಲನೆಯೂ ಮತ್ಸ್ಯೋದ್ಯಮವೂ ಅಭಿವೃದ್ಧಿಯಾಗುತ್ತಿದೆ. ಈ ತಾಲ್ಲೂಕಿನ ಬೆಳಗೊಳದಲ್ಲಿ ಮಂಡ್ಯ ನ್ಯಾಷನಲ್ ಪೇಪರ್ ಮಿಲ್ಸ್ (೧೯೬೨), ಮೈಸೂರ್‌ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ (೧೯೩೭), ಮೈಸೂರು ಕೆಮಿಕಲ್ ಮ್ಯಾನುಫ್ಯಾಕ್ಚರರ್ಸ್ಮ (೧೯೪೧), ಅಲೈಡ್ ರೆಸಿನ್ಸ್ ಅಂಡ್ ಕೆಮಿಕಲ್ಸ್ (೧೯೬೫) ಕಾರ್ಖಾನೆಗಳಿದ್ದು ಕಾಗದ ಮತ್ತು ರಸಾಯನಿಕ ಗೊಬ್ಬರಗಳ ತಯಾರಿಕೆಯಿತ್ತು. ಶ್ರೀರಂಗಪಟ್ಟಣದಲ್ಲಿ ರೇಷ್ಮೆ ನೂಲು ಸಂಸ್ಕರಣ ಕೇಂದ್ರವಿದೆ. ಅರಕೆರೆ ಬಳಿ ಕಚ್ಚಾ ಕಾಗದದ ಕಾರ್ಖಾನೆಯೊಂದು ರೂಪುಗೊಂಡಿತ್ತು. ಇವಲ್ಲದೆ ಈ ತಾಲ್ಲೂಕಿನಲ್ಲಿ ಮೊದಲಿಂದಲೂ ಬೆಲ್ಲದ ತಯಾರಿಕೆ ಇದೆ.

ಈ ತಾಲ್ಲೂಕಿನ ಕೊಡಿಯಾಲ ಕೈಮಗ್ಗದ ಬಟ್ಟೆಗಳಿಗೆ ಪ್ರಸಿದ್ಧ. ಶ್ರೀರಂಗಪಟ್ಟಣದಲ್ಲಿ ಜೇನುಸಾಕಣೆ ಕೇಂದ್ರವಿದೆ. ವ್ಯವಸಾಯದ ಉಪಕರಣಗಳ ತಯಾರಿಕೆಯುಂಟು. ಮೈಸೂರು-ಬೆಂಗಳೂರು, ಮೈಸೂರು-ಹಾಸನ ರೈಲುಮಾರ್ಗಗಳು ಈ ತಾಲ್ಲೂಕು ಮುಂಖಾಂತರ ಹಾದುಹೋಗಿವೆ. ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳ ಜೊತೆಗೆ ತಾಲ್ಲೂಕಿನ ಎಲ್ಲ ಕಡೆಗೂ ಉತ್ತಮ ಮಾರ್ಗ ಸಂಪರ್ಕವಿದೆ. ಶ್ರೀರಂಗಪಟ್ಟಣದ ನೈಋತ್ಯಕ್ಕೆ ಇರುವ ಪಶ್ಚಿಮವಾಹಿನಿ ಒಂದು ಪುಣ್ಯಕ್ಷೇತ್ರ ಮತ್ತು ರೈಲ್ವೆ ನಿಲ್ದಾಣ. ಇಲ್ಲಿ ಕಾವೇರಿ ನದಿಯ ಒಂದು ಕವಲು ಪಶ್ಚಿಮಾಭಿಮುಖವಾಗಿ ಹರಿಯುವುದರಿಂದ ಪಶ್ಚಿಮ ವಾಹಿನಿ ಎಂಬ ಹೆಸರು ಬಂದಿದೆ. ಇಲ್ಲಿ ಬಂಗಾರದೊಡ್ಡಿ ಅಣೆಕಟ್ಟು ಮತ್ತು ಅನೇಕ ಛತ್ರಗಳು ಇದ್ದು ಧಾರ್ಮಿಕ ಕಾರ್ಯಗಳು ನಡೆಯುತ್ತಿರುತ್ತವೆ. ಶ್ರೀರಂಗಪಟ್ಟಣದ ನೈಋತ್ಯಕ್ಕೆ ೫ ಕಿಮೀ ದೂರದಲ್ಲಿರುವ ಪಾಲಹಳ್ಳಿ ಕಾವೇರಿನದಿಯ ಬಲದಂಡೆಯ ಮೇಲಿದೆ.

೧೮೭೧ರವರೆಗೂ ಮೈಸೂರು ಅಷ್ಟಗ್ರಾಮ ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ಆಗಿನ ಪ್ರಸಿದ್ಧ ‘ಅಷ್ಟಗ್ರಾಮ ಶುಗರ್ ವರ್ಕ್ಸ್’ ಸಕ್ಕರೆ ಕಾರ್ಖಾನೆ ಪಾಲಹಳ್ಳಿಯಲ್ಲಿ ನಡೆಯುತ್ತಿತ್ತು (೧೮೪೭-೯೪). ಇದರ ಹತ್ತಿರವೇ ಪ್ರಸಿದ್ಧ ರಂಗನತಿಟ್ಟು (ನೋಡಿ- ರಂಗನತಿಟ್ಟು-ಪಕ್ಷಿಧಾಮ) ಪಕ್ಷಿಧಾಮವಿದೆ. ಶ್ರೀರಂಗಪಟ್ಟಣ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಇತಿಹಾಸ ಪ್ರಸಿದ್ಧ ಪಟ್ಟಣ. ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಕಾವೇರ ಿ ನದಿಯಿಂದ ಸುತ್ತುವರಿದಿರುವ ದ್ವೀಪ ಮತ್ತು ಒಂದು ಪುಣ್ಯಕ್ಷೇತ್ರ. ಮಂಡ್ಯಕ್ಕೆ ನೈಋತ್ಯದಲ್ಲಿ ೨೯ ಕಿಮೀ ದೂರದಲ್ಲೂ ಮೈಸೂರಿನ ಉತ್ತರಕ್ಕೆ ೧೩ ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ ೨೩೪೪೮. ಸ್ಥಳಪುರಾಣದ ಪ್ರಕಾರ ಪೂರ್ವದಲ್ಲಿ ಗೌತಮ ಋಷಿ ಇಲ್ಲಿಯ ಆದಿರಂಗನನ್ನು ಪೂಜಿಸಿ ಇಲ್ಲಿ ವಾಸವಾಗಿದ್ದುದರಿಂದ ಇದಕ್ಕೆ ಗೌತಮಕ್ಷೇತ್ರವೆಂಬ ಹೆಸರಿತ್ತೆಂದು ತಿಳಿದುಬರುವುದು.

೮೯೪ರಲ್ಲಿ ಗಂಗರ ಸಾಮಂತನಾದ ತಿರುಮಲಯ್ಯ ಇಲ್ಲಿಯ ರಂಗನಾಥಸ್ವಾಮಿ ದೇವಾಲಯ ವನ್ನು ಕಟ್ಟಿಸಿ ಇದಕ್ಕೆ ಶ್ರೀರಂಗಪುರವೆಂದು ಹೆಸರಿಟ್ಟನೆಂದು ಕೆಲವು ಶಾಸನಗಳಿಂದ ತಿಳಿದುಬರುತ್ತದೆ. ೧೧೧೭ರಲ್ಲಿ ವೈಷ್ಣವಧರ್ಮವನ್ನು ಅವಲಂಬಿಸಿದ ಅನಂತರ ಹೊಯ್ಸಳ ವಿಷ್ಣುವರ್ಧನ ರಾಮಾನುಜಾಚಾರ್ಯ ರಿಗೆ ಕಾವೇರೀತಿರದಲ್ಲಿ ಅಷ್ಟಗ್ರಾಮಗಳನ್ನು ಬಿಟ್ಟುಕೊಟ್ಟು ಈ ಗ್ರಾಮಗಳ ಮೇಲ್ವಿಚಾರಣೆಗೆ ಹೆಬ್ಬಾರರು ಅಥವಾ ಪ್ರಭುಗಳೆಂಬ ಅಧಿಕಾರಿಗಳನ್ನು ನಿಯಮಿಸಿದ. ೧೧೨೦ರಲ್ಲಿ ವಿಷ್ಣುವರ್ಧನನ ತಮ್ಮನಾದ ಉದಯಾದಿತ್ಯ ಕಾಡಿನಿಂದ ಆವೃತವಾಗಿದ್ದ ಈ ಸ್ಥಳದಲ್ಲಿ ಊರನ್ನು ನಿರ್ಮಿಸಿದ. ೧೫ ಮತ್ತು ೧೬ನೆಯ ಶತಮಾನಗಳಲ್ಲಿ ವಿಜಯನಗರದ ಚಕ್ರವರ್ತಿಗಳು ಶ್ರೀರಂಗಪಟ್ಟಣವನ್ನು ಒಂದು ಪ್ರಾಂತ್ಯವನ್ನಾಗಿ ಮಾಡಿ ಪ್ರಾಂತ್ಯಾಧೀಶನನ್ನು ನಿಯಮಿಸಿದ್ದರು.

ವಿಜಯನಗರದ ಪತನಾನಂತರ ಮೈಸೂರಿನ ರಾಜಒಡೆ ಯರು ೧೬೧೦ರಲ್ಲಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. ಮುಂದೆ ೧೭೬೧ರ ವೇಳೆಗೆ ಹೈದರನು ಪ್ರಾಬಲ್ಯಕ್ಕೆ ಬಂದು ಮೈಸೂರು ರಾಜರನ್ನು ಮೂಲೆಗೊತ್ತಿ ತಾನೇ ಆಡಳಿತ ನಡೆಸತೊಡಗಿದ. ಅನಂತರ ಇವನ ಮಗ ಟಿಪ್ಪು ಅಧಿಕಾರಕ್ಕೆ ಬಂದ. ಇವನ ಕಾಲದಲ್ಲಿ ಈ ಸ್ಥಳ ಸಾಕಷ್ಟು ಅಭಿವೃದ್ಧಿಹೊಂದಿತು. ೧೭೯೯ರಲ್ಲಿ ಟಿಪ್ಪುವಿನ ಮರಣಾನಂತರ ಬ್ರಿಟಿಷರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. ಇಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ದೇವಾಲಯದ ಹೆಚ್ಚು ಒಳಭಾಗ ಹೊಯ್ಸಳರ ಕಾಲದ್ದು.

ಗರ್ಭಗೃಹ ಮತ್ತು ಸುಕನಾಸಿಗಳ ಚಾವಣಿಗಳ ಮಧ್ಯದಲ್ಲಿ ಪದ್ಮಗಳನ್ನು ಬಿಡಿಸಿದೆ. ವಿಜಯನಗರ ಕಾಲದ ಗಂಟೆ ಮಾದರಿಯ ಕಂಬಗಳು ನವರಂಗದಲ್ಲಿವೆ. ನವರಂಗ ದ್ವಾರದ ಬಳಿ ಎರಡು ದೊಡ್ಡ ದ್ವಾರಪಾಲಕ ವಿಗ್ರಹಗಳಿವೆ. ಮಹಾದ್ವಾರದ ಗೋಪುರ, ಮುಖಮಂಟಪ ಮತ್ತು ಗರ್ಭಗೃಹದ ಗೋಪುರ ವಿಜಯನಗರ ಶಿಲ್ಪ ಲಕ್ಷಣವುಳ್ಳವು. ದೇವಾಲಯದಲ್ಲಿ ಹೊಯ್ಸಳ ಮತ್ತು ವಿಜಯನಗರ ಕಾಲಕ್ಕೆ ಸೇರಿದ ಕೆಲವು ದೇವತೆಗಳ ಋಷಿಗಳ ವಿಗ್ರಹಗಳು ಆಕರ್ಷಕವಾಗಿವೆ. ಶ್ರೀರಂಗನಾಥನ ಮುಖ್ಯ ವಿಗ್ರಹ ಬಹು ಆಕರ್ಷಕವಾದದ್ದು. ಶ್ರೀರಂಗನಾಥ ಏಳು ಹೆಡೆಗಳುಳ್ಳ ಆದಿಶೇಷನ ಮೇಲೆ ಪವಡಿಸಿದ್ದಾನೆ. ಶ್ರೀರಂಗನಾಥನ ಪಾದದ ಬಳಿ ಲಕ್ಷ್ಮಿವಿಗ್ರಹವಿದೆ. ಹಾಗೇ ಗೌತಮ ಮುನಿಯ ವಿಗ್ರಹವೂ ಇದೆ. ಇಲ್ಲಿನ ಕೆಲವು ಬೆಳ್ಳಿ ಪದಾರ್ಥಗಳು ಟಿಪ್ಪುಸುಲ್ತಾನ್ ದೇವಾಲಯಕ್ಕೆ ದಾನ ಕೊಟ್ಟಿದ್ದೆಂದು ತಿಳಿದುಬರುತ್ತದೆ. ಇಲ್ಲಿರುವ ಇತರ ದೇವಾಲಯಗಳಲ್ಲಿ ನರಸಿಂಹ ಮತ್ತು ಗಂಗಾಧರೇಶ್ವರ ದೇವಾಲಯಗಳು ಮುಖ್ಯವಾದವು. ನರಸಿಂಹ ದೇವಾಲಯವನ್ನು ಕಂಠೀರವ ನರಸರಾಜ ಒಡೆಯರ್ (೧೬೩೮-೫೯) ಕಟ್ಟಿಸಿದರೆಂದು ತಿಳಿದು ಬರುತ್ತದೆ.

ದೊಡ್ಡದಾದ ಗರ್ಭಗೃಹ, ವಿಶಾಲವಾದ ಸುಕನಾಸಿ ಮತ್ತು ಅನೇಕ ಕಂಬಗಳುಳ್ಳ ನವರಂಗವಿದೆ. ಹೊಯ್ಸಳರ ಕಾಲದ ಲಕ್ಷ್ಮೀನರ ಸಿಂಹ ವಿಗ್ರಹ ಬಹು ಅಚ್ಚುಕಟ್ಟಾಗಿ ಕೆತ್ತಿದೆ. ಈ ದೇವಾಲಯದೊಳಗಿರುವ ಅಂಬೆಗಾಲು ಕೃಷ್ಣ ಆಕರ್ಷಣೀಯ. ಇಲ್ಲಿ ಮೂರುವರೆ ಅಡಿ ಎತ್ತರವಿರುವ ೧೭ನೆಯ ಶತಮಾನದ ಕಂಠೀರವ ನರಸರಾಜ ಒಡೆಯರ ವಿಗ್ರಹವಿದೆ. ಸು. ೧೬ನೆಯ ಶತಮಾನದ ಗಂಗಾಧರೇಶ್ವರ ದೇವಾಲ ಯವನ್ನು ಹೊಯ್ಸಳರ ಕಾಲದಲ್ಲಿ ಕಟ್ಟಿದ್ದು. ಈ ದೇವಾಲಯದ ನವರಂಗದಲ್ಲಿ ೬ ಮುಖಗಳೂ ೧೨ ಕೈಗಳೂ ಇರುವ ಸುಬ್ರಹ್ಮಣ್ಯ ವಿಗ್ರಹವಿದೆ.

ಮಂಟಪದಲ್ಲಿ ೧೮ನೆಯ ಶತಮಾನದ, ಅಂದವಾಗಿ ಬಿಡಿಸಿರುವ ೧೫ ಮಂದಿ ಶಿವಶರಣರ ಮೂರ್ತಿಗಳಿವೆ. ದಳವಾಯಿ ನಂಜರಾಜ (೧೮ನೆಯ ಶತಮಾನ) ಕೊಟ್ಟಿದ್ದೆನ್ನುವ ಒಂದು ತಾಮ್ರದ ಸುಂದರ ದಕ್ಷಿಣಾಮೂರ್ತಿಯ ಚಿತ್ರವಿರುವ ಶಾಸನವಿದೆ. ರಂಗನಾಥಸ್ವಾಮಿ ದೇವಾಲಯದ ಮುಂಭಾಗದ ಬಳಿ ಮೂರನೆಯ ಕೃಷ್ಣರಾಜ ಒಡೆಯರ ಜನ್ಮಸ್ಥಳವನ್ನು ಸರ್ಕಾರ ರಕ್ಷಿಸಿದ್ದು ಅಲ್ಲೊಂದು ಮಂಟಪವನ್ನು ಕಟ್ಟಿಸಲಾಗಿದೆ. ಶ್ರೀರಂಗಪಟ್ಟಣವನ್ನು ಸುತ್ತುವರಿದಿದ್ದ ಗಟ್ಟಿ ಕೋಟೆಯನ್ನು ಈಗಲೂ ಕಾಣಬಹುದು. ಟಿಪ್ಪುವಿನ ಅರಮನೆ ಎಂದು ಹೇಳುವ ಲಾಲ್‌ಮಹಲ್ ಸಂಪೂರ್ಣ ನಾಶವಾಗಿದೆ. ಖೈದಿಗಳನ್ನು ಕೂಡಿಡುತ್ತಿದ್ದ ಎರಡು ನೆಲಮಾಳಿಗೆ ಬಂದೀಖಾನೆಗಳಿವೆ. ಕೋಟೆಯ ಸುತ್ತ ಕಂದಕವಿದ್ದು ಅದರಲ್ಲಿ ಕಾವೇರಿ ನದಿಯ ನೀರು ತುಂಬುವಂತೆ ಮಾಡಲಾಗುತ್ತಿತ್ತು.

ವಿಳಾಸ:

ಶ್ರೀರಂಗಪಟ್ಟಣ, ಕರ್ನಾಟಕ

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

-ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :15 ಕಿಲೋ ಮೀಟರ್-ರೈಲ್ವೆ ನಿಲ್ದಾಣ ದಿಂದ :19ಕಿಲೋ ಮೀಟರ್-ವಿಮಾನ ನಿಲ್ದಾಣ ದಿಂದ : 26.5ಕಿಲೋ ಮೀಟರ್