ಬಿಳಿಗಿರಿರಂಗನ ಬೆಟ್ಟ | Mysuru Dasara 2019

ಬಿಳಿಗಿರಿರಂಗನ ಬೆಟ್ಟ

ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯ ಶ್ರೀರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯ ಪ್ರಕೃತಿ ಎಂದೆಂದೂ ಮನಕ್ಕೆ ಮುದ ನೀಡುತ್ತದೆ. ಅದರಲ್ಲೂ ದಟ್ಟ ಹಸಿರಿನ ಕಾನನ ಇನ್ನೂ ಸೊಗಸು. ಬನ್ನಿ, ಕಣ್ಣಿಗೆ ತಂಪನ್ನೀಯುವ ಅಂದ-ಚಂದದ ಬಿಳಿಗಿರಿರಂಗನ ಬೆಟ್ಟವನ್ನೂ, ಮನಕ್ಕೆ ನೆಮ್ಮದಿ ನೀಡುವ ಬಿಳಿಗಿರಿ ರಂಗನಾಥಸ್ವಾಮಿಯನ್ನು ನೆನೆಯೋಣ. ಇಲ್ಲಿನ ಕಾಡಿನ ಬಯಲಿನಷ್ಟೇ ದೇವಾಲಯವೂ ಸುಂದರ. ಕಾಡಿನಲ್ಲಿರುವ ಈ ಗುಡಿಯು ಪ್ರಕೃತಿ ತಾಣವಾಗಿ ಬಯಲಿನಂತೆಯೇ ಇದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಆಗ್ನೇಯಕ್ಕೆ ಯಳಂದೂರಿನಿಂದ ಸುಮಾರು 15ಕಿಮೀ ದೂರದಲ್ಲಿ ಇರುವ ಬೆಟ್ಟ. ಸಮುದ್ರಮಟ್ಟದಿಂದ ಸುಮಾರು 1552 ಮೀಟರ್ ಎತ್ತರವಿದೆ.

ಈ ಬೆಟ್ಟವನ್ನು ಬಿಳಿಗಿರಿ ಬೆಟ್ಟ, ಬಿಳಿಕಲ್ಲ ಬೆಟ್ಟ, ಶ್ವೇತಾದ್ರಿ ಎಂದೂ ಕರೆಯುತ್ತಾರೆ. ಬೆಟ್ಟದ ಮೇಲೆ ಬಿಳಿಗಿರಿರಂಗಸ್ವಾಮಿ ದೇವಾಲಯವಿದ್ದು ಪುಣ್ಯಕ್ಷೇತ್ರವೆನಿಸಿದೆ. ಬೆಟ್ಟ ಏರಲು ಯಳಂದೂರು ಹಾಗೂ ಚಾಮರಾಜನಗರದಿಂದ ರಸ್ತೆಗಳಿವೆ. ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿ ದಟ್ಟ ಕಾಡಿದೆ. ಇಲ್ಲಿ ಶ್ರೀಗಂಧ, ಹೊನ್ನೆ, ಮತ್ತಿ, ಬೀಟೆ, ಬನ್ನಿ ಮೊದಲಾದ ಅಮೂಲ್ಯ ಮರಗಳಿವೆ. ಕಾಡಿನಲ್ಲಿ ಹುಲಿ, ಚಿರತೆ, ಕರಡಿ, ಆನೆ, ಕಾಡೆಮ್ಮೆ, ವಿವಿಧ ರೀತಿಯ ಜಿಂಕೆ ಮೊದಲಾದ ಪ್ರಾಣಿಗಳಿವೆ. ಬೆಟ್ಟದ ಸುತ್ತಮುತ್ತ ಆನೆಯ ಹಾವಳಿ ಇದೆ. ಬೆಟ್ಟದ ಮೇಲಿನಿಂದ ಕಾಣುವ ನಿಸರ್ಗ ದೃಶ್ಯ ರಮಣೀಯ. ಇಲ್ಲಿ ವಾಸಿಸುವವರು ಹೆಚ್ಚಾಗಿ ಸೋಲಿಗರು. ಬೆಟ್ಟದ ಮೇಲೆ ಕೆಲವೆಡೆ ಕಾಫಿ, ಕಿತ್ತಳೆ, ಬಾಳೆ, ಹಿಪ್ಪನೇರಳೆ ಬೆಳೆಯುವ ಸಣ್ಣ ತೋಟಗಳಿವೆ.

ಬೆಟ್ಟದ ಮೇಲೆ ರೇಷ್ಮೆ ಸಂಶೋಧನಾ ಕೇಂದ್ರವಿದೆ. ಪ್ರವಾಸಿ ಬಂಗಲೆ ಸುತ್ತ ಸಿಂಕೋನ ಮರಗಳಿವೆ. ದೇವಾಲಯದ ಪ್ರಾಕಾರ ನವರಂಗ ಹಾಗೂ ಮುಖಮಂಟಪ ಮೊದಲಾದವು ಸಾಮಾನ್ಯ ರೀತಿಯ ದ್ರಾವಿಡಶೈಲಿಯ ಕಟ್ಟಡ. ಮುಖ್ಯ ದೇವರು ಬಿಳಿಗಿರಿ ರಂಗಸ್ವಾಮಿ (ಶ್ರೀನಿವಾಸ) ನವರಂಗದ ಬಲಭಾಗದ ಮೂರು ಗೂಡುಗಳಲ್ಲಿ ಲೋಹ ನಿರ್ಮಿತ ಬಿಳಿಗಿರಿರಂಗ, ಹನುಮಂತ ಮಣವಾಳ ಮಹಾಮುನಿಗಳ ಮೂರ್ತಿಗಳಿವೆ. ಬಲ ಭಾಗದಲ್ಲಿ ಅಲರ್ಮೇಲು ಮಂಗೈ ಅಮ್ಮನವರ ಸನ್ನಿಧಿ ಇದೆ. ನವರಂಗದ ಎಡಭಾಗದ ಗೂಡುಗಳಲ್ಲಿ ನಮ್ಮಾಳ್ವಾರ್ ಮತ್ತು ರಾಮಾನುಜರ ವಿಗ್ರಹಗಳಿವೆ. ದ್ವಾರದ ಬಲಗಡೆಯಲ್ಲಿರುವ ಇನ್ನೊಂದು ಗೂಡಿನಲ್ಲಿ ವೇದಾಂತಚಾರ್ಯರ ವಿಗ್ರಹ ಕಾಣಬಹುದು. ಮೂಲದೇವರನ್ನು ವಸಿಷ್ಠರು ಪ್ರತಿಷ್ಠಾಪಿಸಿದರೆಂಬುದು ಸ್ಥಳಪುರಾಣ. ಇಲ್ಲಿಯ ಬಿಳಿಕಲ್ಲು ತಿರುವೇಂಕಟನಾಥನಿಗೆ ಹದಿನಾಡಿನ ಮುದ್ದರಾಜ 1667ರಲ್ಲಿ ದತ್ತಿ ಬಿಟ್ಟ ವಿಷಯವನ್ನು ಇಲ್ಲಿರುವ ತಾಮ್ರಶಾಸನ ತಿಳಿಸುತ್ತದೆ. ದಿವಾನ್ ಪೂರ್ಣಯ್ಯ ಈ ದೇವಾಲಯದ ಸೇವೆಗಾಗಿ 2 ಗ್ರಾಮಗಳನ್ನು ದತ್ತಿ ಬಿಟ್ಟರು. ಬ್ರಹ್ಮಾಂಡಪುರಾಣದಲ್ಲಿ ಈ ಬೆಟ್ಟವನ್ನು ದಕ್ಷಿಣ ತಿರುಪತಿ ಎನ್ನಲಾಗಿದೆ. ವೈಶಾಖ ಮಾಸದಲ್ಲಿ (ಏಪ್ರಿಲ್) ರಥೋತ್ಸವ ನಡೆಯುವುದು. ದೇವಸ್ಥಾನದಿಂದ 16 ಕಿಮೀ ದೂರದಲ್ಲಿ ಭಾರ್ಗವೀ ನದಿ ಹರಿಯುತ್ತದೆ. ಬೆಟ್ಟದ ಮೇಲೆ ಗಂಗಾಧರೇಶ್ವರನ ಗುಡಿ ಇದೆ. ಬಿಳಿಗಿರಿರಂಗಸ್ವಾಮಿಯ ದೇವಸ್ಥಾನದಿಂದ ಸುಮಾರು 19 ಕಿಮೀ ದೂರದಲ್ಲಿ ಶಿವಸಮುದ್ರದ ಗಂಗರಾಜ ತನ್ನ ಅಳಿಯನಾಗಿ ಕುಂಚುಕೋಟೆಯನ್ನು ನಿರ್ಮಿಸಿದುದಾಗಿ ತಿಳಿಯುತ್ತದೆ. ಈಗಲೂ ಆ ಕೋಟೆಯ ಅವಶೇಷಗಳನ್ನು ನೋಡಬಹುದಾಗಿದೆ.

ಬೆಟ್ಟದ ಬುಡದಲ್ಲಿ ಬೃಂದಾವನವೆಂಬ ತುಳಸಮ್ಮನ ಗುಡಿ ಇದೆ. ಮಧ್ಯಭಾಗದಲ್ಲಿ ಕನಕದಾಸರದೆಂದು ಹೇಳಲಾಗುವ ಗುಹೆ ಇದೆ. ಇಲ್ಲಿ ವಾಸ್ತವ್ಯಕ್ಕೆ ದೇವಳದ ಅತಿಥಿಗೃಹವಿದೆ. ಸಮೀಪದ ಕೆ.ಗುಡಿಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಎಲ್ಲಾ ಅನುಕೂಲತೆಗಳಿರುವ ಆಶ್ರಯ ತಾಣವಿದೆ. ಇದಲ್ಲದೆ 45 ನಿಮಿಷ ಪ್ರಯಾಣ ಮಾಡಿದರೆ ಕೊಳ್ಳೇಗಾಲದಲ್ಲೂ, 90 ನಿಮಿಷ ಪ್ರಯಾಣ ಮಾಡಿದರೆ ಮೈಸೂರಿನಲ್ಲೂ ತಂಗಬಹುದು. ಮೈಸೂರು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ಯಳಂದೂರುಗಳಿಂದ ಸರ್ಕಾರಿ ಹಾಗೂ ಖಾಸಗಿ ಬಸ್ ಸೌಕರ್ಯವಿದೆ. ಕಾಡು ಪ್ರಾಣಿಗಳಿಗೆ ಹಾಗೂ ಅವುಗಳಿಂದ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸಂಜೆ ಆರರಿಂದ ಬೆಳಿಗ್ಗೆ ಆರು ಗಂಟೆಯವರೆಗೆ ಬೆಟ್ಟ ಪ್ರವೇಶ ನಿಷಿದ್ಧ. ಚಪ್ಪಲಿ ಸೇವೆ ಚಪ್ಪಲಿ ಸೇವೆ ಎಂದರೆ ಗಾಬರಿಯಾಗಬೇಡಿ! ಬಿಳಿಗಿರಿ ರಂಗನಾಥಸ್ವಾಮಿಗೆ ಪ್ರತಿ ವರ್ಷ ಉತ್ಸವದ ವೇಳೆಯಲ್ಲಿ ಒಂದು ಜೊತೆ ಚಪ್ಪಲಿಯನ್ನು ಸೇವಾರೂಪದಲ್ಲಿ ಆರ್ಪಿಸಲಾಗುತ್ತದೆ. ದೇವರ ಈ ಪಾದರಕ್ಷೆ ನಿರ್ಮಾಣವನ್ನು ವಂಶ ಪಾರಂಪರ್ಯವಾಗಿ ಬೇರೆ ಬೇರೆ ಊರುಗಳ ಎರಡು ಕುಟುಂಬಗಳು ತಲಾ ಒಂದೊಂದು ಚಪ್ಪಲಿ ತಯಾರಿಸುತ್ತಾರೆ. ಆದರೆ ಪೂಜೆಗೆ ತಂದಾಗ ಅವುಗಳ ವಿನ್ಯಾಸ, ಚಿತ್ತಾರದ ಕಲೆ, ಅಳತೆ ಒಂದೇ ಆಗಿರುತ್ತದೆ. ದೇವಾಲಯದ ಪೆಟ್ಟಿಗೆಯಲ್ಲಿಟ್ಟ ಚಪ್ಪಲಿ ಮುಂದಿನ ಜಾತ್ರೆಯ ವೇಳೆಗೆ ಕ್ರಮೇಣವಾಗಿ ಸವೆಯುತ್ತದೆ.

ವಿಳಾಸ:

ಬಿ.ಆರ್.ಹಿಲ್ಸ್ , ಕರ್ನಾಟಕ 571117

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

-ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :61ಕಿಲೋಮೀಟರ್-ರೈಲ್ವೆ ನಿಲ್ದಾಣ ದಿಂದ : 62.2 ಕಿಲೋಮೀಟರ್-ವಿಮಾನ ನಿಲ್ದಾಣ ದಿಂದ: 80ಕಿಲೋ ಮೀಟರ್