ತಲಕಾಡು | Mysuru Dasara 2019

ಮೈಸೂರು ಜಿಲ್ಲೆಯ (ಕರ್ನಾಟಕ ರಾಜ್ಯ) ತಿರುಮಕೂಡ್ಲು ನರಸೀಪುರದಲ್ಲಿರುವ ಒಂದು ಪ್ರಾಚೀನ ಪಟ್ಟಣ, ಹಿಂದೂಗಳ ಪುಣ್ಯಕ್ಷೇತ್ರ, ಹೋಬಳಿಯ ಕೇಂದ್ರ. ಕಾವೇರಿ ನದಿಯ ಎಡದಂಡೆಯ ಮೇಲೆ, ಉ. ಅ. 12ಠ 11′ ಮತ್ತು ಪೂ. ರೇ, 77ಠ 2′ ನಲ್ಲಿ, ಮೈಸೂರಿನ ಆಗ್ನೇಯಕ್ಕೆ 45 ಕಿಮೀ. ದೂರದಲ್ಲಿದೆ. 1868ರ ವರೆಗೂ ಇದು ತಲಕಾಡು ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ಆ ವರ್ಷ ತಿರುಮಕೂಡ್ಲು ನರಸೀಪುರ ಆಡಳಿತ ಕೇಂದ್ರವಾಯಿತು. ಅನಂತರ ತಾಲ್ಲೂಕಿನ ಹೆಸರನ್ನೂ ತಿರುಮಕೂಡ್ಲು ನರಸೀಪುರವೆಂದು ಬದಲಾಯಿಸಲಾಯಿತು.

ಪುರಾಣ, ಇತಿಹಾಸ : ತಲಾ ಮತ್ತು ಕಾಡ ಎಂಬ ಕಿರಾತಸೋದರರಿಂದ ಇದಕ್ಕೆ ತಲಕಾಡು ಎಂಬ ಹೆಸರು ಬಂತೆಂದೂ ಆನೆಯ ಜನ್ಮ ಪಡೆದಿದ್ದ ಸೋಮದತ್ತನೆಂಬ ಋಷಿಯೂ ಅವನ ಶಿಷ್ಯರೂ ಇಲ್ಲಿ ಮೋಕ್ಷ ಪಡೆದುದರಿಂದ ಇದು ಗಜಾರಣ್ಯಕ್ಷೇತ್ರವಾಯಿತೆಂದೂ ಪೌರಾಣಿಕ ಕಥೆಯಿದೆ. ತಲವನಪುರವೆಂಬುದು ಇದರ ಇನ್ನೊಂದು ಹೆಸರು. ಹಿಂದಿನ ಕಾಲದಲ್ಲಿ ಸೋಮದತ್ತನೆಂಬ ಒಬ್ಬ ಬ್ರಾಹ್ಮಣ, ಸಂಸಾರದಲ್ಲಿ ವಿರಕ್ತಿ ತಳೆದು ತನ್ನ ಶಿಷ್ಯರೊಡನೆ ಕಾಶೀಕ್ಷೇತ್ರಕ್ಕೆ ಹೋಗಿ ಮೋಕ್ಷ ಪಡೆಯಲು ಕೈಲಾಸನಾಥನಾದ ಶಿವನನ್ನು ಕುರಿತು ಉಗ್ರ ತಪ್ಪಸ್ಸನ್ನು ಆಚರಿಸಿದ, ಶಿವ ಪ್ರತ್ಯಕ್ಷನಾಗಿ, ಒಂದು ವರವನ್ನು ಬೇಡಲು ಸೋಮದತ್ತನಿಗೆ ಹೇಳಿದ.

ಮನುಷ್ಯ ಯಾವ ಸ್ಥಳಕ್ಕೆ ಹೋದರೆ ಜನನ ಮರಣಾದಿ ದುಃಖಗಳಿಗೆ ಆಸ್ಪದವಿಲ್ಲದೆ, ಸದಾ ಆನಂದದಿಂದಿರಲು ಸಾಧ್ಯವೋ ಅಂಥ ಸ್ಥಳವನ್ನು ತಿಳಿಸಬೇಕೆಂದು ಸೋಮದತ್ತ ಕೋರಿದ. ಆಗ ಶಂಭು ಅವನಿಗೆ ಋಚೀಕ ಮಹರ್ಷಿಯ ಆಶ್ರಮವಿರುವ ಸಿದ್ಧಾರಣ್ಯ ಕ್ಷೇತ್ರಕ್ಕೆ ಹೋಗಬೇಕೆಂದೂ ಆ ಸ್ಥಳದಲ್ಲಿ ತಾನು ವೈದ್ಯನಾಥನೆಂಬ ಹೆಸರಿನಿಂದ ನೆಲೆಸುವುದಾಗಿಯೂ ಹೇಳಿ ಅಂತರ್ಧಾನನಾದ. ಕಾವೇರಿ-ಕಪಿಲಾ ನದಿಗಳ ಸಂಗಮಸ್ಥಾನದ ಹತ್ತಿರವಿದ್ದ ಈ ಸ್ಥಳಕ್ಕೆ ಸೋಮದತ್ತ ತನ್ನ ಶಿಷ್ಯರೊಂದಿಗೆ ಪ್ರಯಾಣ ಬೆಳೆಸಿದ. ವಿಂಧ್ಯ ಪರ್ವತಗಳ ಹತ್ತಿರ ಬಂದಾಗ ಆನೆಗಳು ಅವರನ್ನು ಕೊಂದವು.

ಅವರು ಆನೆಗಳಾಗಿ ಹುಟ್ಟಿ ಈ ಸ್ಥಳವನ್ನು ಸೇರಿದರು. ಇಲ್ಲಿ ಈಶ್ವರ ಒಂದು ಶಾಲ್ಮಲೀವೃಕ್ಷದ ಪೊದರಿನ ಕೆಳಗೆ ಲಿಂಗರೂಪಿಯಾಗಿರುವುದನ್ನು ಅರಿತು ಆ ಆನೆಗಳು ಪ್ರತಿನಿತ್ಯವೂ ಸಮೀಪದಲ್ಲಿದ್ದ ಗೋಕರ್ಣತೀರ್ಥವೆಂಬ ಸರೋವರದಲ್ಲಿ ಮಿಂದು ಅಲ್ಲಿಯ ನೀರನ್ನು ಮತ್ತು ಕೆಂದಾವರೆಗಳನ್ನು ಸೊಂಡಿಲುಗಳಲ್ಲಿ ತಂದು ಲಿಂಗದ ಮೇಲೆ ಹಾಕಿ ಪೂಜೆಮಾಡಿ ಹೋಗುತ್ತಿದ್ದುವು. ಆ ಕಾಡಿನಲ್ಲಿ ವಾಸಿಸುತ್ತಿದ್ದ ತಲಾ ಮತ್ತು ಕಾಡರು ಇದನ್ನು ನೋಡಿ, ಮರದ ಬುಡದಲ್ಲಿ ಏನಿದೆಯೆಂಬ ಕುತೂಹಲದಿಂದ ತಮ್ಮ ಹರಿತವಾದ ಕೊಡಲಿಗಳಿಂದ ಅದಕ್ಕೆ ಬಲವಾದ ಏಟು ಹಾಕಿದರು. ಮರದ ಅಡಿಯಲ್ಲಿದ್ದ ಲಿಂಗ ಭಿನ್ನವಾಗಿ ಅದರಿಂದ ರಕ್ತ ಹರಿಯತೊಡಗಿತು. ಬೇಡರು ಭೀತರಾದರು. ಶಾಲ್ಮಲೀ ವೃಕ್ಷದ ಎಲೆಗಳನ್ನೂ ಫಲವನ್ನೂ ಅರೆದು ಅದರ ರಸವನ್ನು ಗಾಯಕ್ಕೆ ಹಚ್ಚಬೇಕೆಂದು ಅಶರೀರವಾಣಿಯೊಂದು ತಿಳಿಸಿತು. ಬೇಡರು ಹಾಗೆ ಮಾಡಿದ ಕೂಡಲೇ ರಕ್ತ ನಿಂತಿತು.

ಆ ವಾಣಿಯ ಆದೇಶದ ಮೇರೆಗೆ ಬೇಡರು ಹಾಲನ್ನು ಕುಡಿಯಲು ಅವರು ತಮ್ಮ ಸ್ವರೂಪವನ್ನು ಬಿಟ್ಟು ಗಣೇಶ್ವರಾದರು. ಮರುದಿನ ಬಂದ ಆನೆಗಳು ತಮ್ಮ ನಿತ್ಯಕರ್ಮವನ್ನಾಚರಿಸಿ ಬಾಯಾರಿಕೆಯಿಂದ ಹಾಲನ್ನು ಕುಡಿಯಲು ಅವಕ್ಕೂ ಮುಕ್ತಿ ದೊರಕಿತು. ಆದ್ದರಿಂದ ಆ ಸ್ಥಳಕ್ಕೆ ತಲಕಾಡು ಮತ್ತು ಗಜಾರಣ್ಯಕ್ಷೇತ್ರ ಎಂಬ ಹೆಸರುಗಳು ಬಂದುವು. ಅಲ್ಲದೆ ತನ್ನ ತಲೆಯ ಗಾಯಕ್ಕೆ ತಾನೆ ಔಷಧವನ್ನು ಹೇಳಿದ್ದನಾದ್ದರಿಂದ ಈಶ್ವರನಿಗೆ ವೈದ್ಯನಾಥನೆಂಬ ಹೆಸರು ಅನ್ವರ್ಥವಾಯಿತೆಂದು ಹೇಳಲಾಗಿದೆ. ತಲಕಾಡನ್ನು ಕುರಿತ ಪ್ರಥಮ ಉಲ್ಲೇಖ ಗಂಗರ ಆಳ್ವಿಕೆಯ ಕಾಲಕ್ಕೆ ಸಂಬಂಧಿಸಿದ್ದಾಗಿದೆ. ಮೊದಲು ಕೋಳಾಲದಲ್ಲಿ ಆಳುತ್ತಿದ್ದ ಗಂಗರು 500ರ ಸುಮಾರಿಗೆ ರಾಜಧಾನಿಯನ್ನು ತಲಕಾಡಿಗೆ ಬದಲಾಯಿಸಿರಬಹುದು. ಗಂಗರಾಜನಾದ ಹರಿವರ್ಮ ಇಲ್ಲಿ ನೆಲೆಸಿದ್ದನೆಂದು ಒಂದು ಶಾಸನದಲ್ಲಿದೆ.

ಗಂಗರಾಜ ಶ್ರೀಪುರುಷನ ಕಾಲದ ಶಾಸನಗಳು ಇಲ್ಲಿ ದೊರೆತಿವೆ. ತಲಕಾಡು ಚೋಳರ ಆಳ್ವಿಕೆಗೆ ಸೇರಿದಾಗ ಅವರು ಇದನ್ನು ರಾಜರಾಜಪುರವೆಂದು ಕರೆದರು. ಚೋಳರ ಆಳ್ವಿಕೆಯ ಒಂದು ನೂರು ವರ್ಷಗಳಲ್ಲಿ ತಲಕಾಡು ಏಳಿಗೆ ಹೊಂದಿತು. ಆಗ ಇಲ್ಲಿ ಅನೇಕ ಶಿವ ಮತ್ತು ವಿಷ್ಣು ದೇವಾಲಯಗಳು ನಿರ್ಮಿತವಾದುವೆಂದು ಹೇಳಲಾಗಿದೆ. 1116 ರಲ್ಲಿ ಹೊಯ್ಸಳ ವಿಷ್ಣುವರ್ಧನನ ದಂಡನಾಯಕ ಗಂಗರಾಜ, ಚೋಳರ ಮೇಲೆ ಯುದ್ಧ ಮಾಡಿ ಅವರನ್ನು ಸೋಲಿಸಿ ತಲಕಾಡನ್ನು ವಶಪಡಿಸಿಕೊಂಡ. ತಲಕಾಡುಗೊಂಡನೆಂಬ ಬಿರುದನ್ನು ವಿಷ್ಣುವರ್ಧನ ಧರಿಸಿದ. ಅವನೂ ಅವನ ತರುವಾಯ ಬಂದ ರಾಜರೂ ತಲಕಾಡನ್ನು 14ನೆಯ ಶತಮಾನದ ಮಧ್ಯಭಾಗದವರೆಗೆ ತಮ್ಮ ವಶದಲ್ಲಿಟ್ಟುಕೊಂಡಿದ್ದರು, ತಲಕಾಡು ಈ ಸಮಯದಲ್ಲಿ ಅತ್ಯಂತ ಉನ್ನತಿ ಹೊಂದಿ ಏಳು ಪುರಗಳನ್ನೂ ಐದು ಮಠಗಳನ್ನೂ ಒಳಗೊಂಡು ಹೊಯ್ಸಳರ ಉಪರಾಜಧಾನಿಯಾಗಿ ಮೆರೆಯಿತು.

3 ನೆಯ ಬಲ್ಲಾಳನ ಕಾಲದಲ್ಲಿ (1291-1342) ಅವನ ಮುಖ್ಯಮಂತ್ರಿಯಾದ ಪೆರುಮಾಳ್ ಡಣಾಯಕ ತಲಕಾಡಿನ ಆಚೆಯ ದಡದ ಮೇಲಿರುವ ಒಂದು ಪಾಠಶಾಲೆಯನ್ನು ಕಟ್ಟಿಸಿ ಅದಕ್ಕೆ ಜಹಗೀರುಗಳನ್ನು ಹಾಕಿಕೊಟ್ಟ. ಹೊಯ್ಸಳ ಚಕ್ರವರ್ತಿಗಳು ಶಿವ ಮತ್ತು ವಿಷ್ಣು ದೇವಾಲಯಗಳೆರಡಕ್ಕೂ ಸಹಾಯ ಸಲ್ಲಿಸುತ್ತಿದ್ದರು. 1117ರಲ್ಲಿ ವಿಷ್ಣುವರ್ಧನ ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯವನ್ನು ಕಟ್ಟಿಸಿದ.

ವಿಳಾಸ:

ತಲಕಾಡು,ಕರ್ನಾಟಕ 571122

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

-ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ : 47 ಕಿಲೋ ಮೀಟರ್-ರೈಲ್ವೆ ನಿಲ್ದಾಣ ದಿಂದ : 49 ಕಿಲೋ ಮೀಟರ್-ವಿಮಾನ ನಿಲ್ದಾಣ ದಿಂದ : 57ಕಿಲೋ ಮೀಟರ್