ಮೈಸೂರು ಸ್ಯಾಂಡಲ್ ಸಾಬೂನು | Mysuru Dasara 2019

ಇದು ಕರ್ನಾಟಕ ಸರ್ಕಾರದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ ತಯಾರಾಗುವ ಸಾಬೂನಿನ ಒಂದು ಬ್ರ್ಯಾಂಡ್. ಸಂಪೂರ್ಣ ಗಂಧದೆಣ್ಣೆಯಿಂದ ತಯಾರಿಸಲಾಗುವ ಜಗತ್ತಿನ ಏಕೈಕ ಸಾಬೂನು ಎಂದು ಪ್ರಸಿದ್ಧವಾಗಿದೆ. ಇದು ೧೯೧೬ರಿಂದ ತಯಾರಾಗುತ್ತಿದೆ. ಆಗ ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ರು ಬೆಂಗಳೂರಿನಲ್ಲಿ ಸರ್ಕಾರಿ ಸೋಪ್ ಫ್ಯಾಕ್ಟರಿಯನ್ನು ಸ್ಥಾಪಿಸಿದರು.ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ, ಶ್ರೀ ಎಸ್. ಜಿ. ಶಾಸ್ತ್ರಿ ಈ ಮೂವರು ಮೈಸೂರು ಸ್ಯಾಂಡಲ್ ಸೋಪ್‍ನ ಪ್ರವರ್ತಕರು.ಮೊದಲನೇ ವಿಶ್ವಯುದ್ಧದ ಕಾರಣದಿಂದ ಯುರೋಪಿಗೆ ರಫ್ತು ಸಾಧ್ಯವಾಗದಿದ್ದಾಗ ಹೇರಳವಾಗಿ ದೊರೆಯುತ್ತಿದ್ದ ಗಂಧದ ಮರ ಮತ್ತು ಹೇರಳವಾಗಿದ್ದ ಗಂಧದ ಮರದ ದಾಸ್ತಾನು ಇದಕ್ಕೆ ಮುಖ್ಯ ಪ್ರೇರಣೆಯಾಗಿತ್ತು. ೧೯೮೦ರಲ್ಲಿ ಸರ್ಕಾರಿ ಸೋಪ್ ಕಾರ್ಖಾನೆ ಮತ್ತು ಶಿವಮೊಗ್ಗದ ಗಂಧದೆಣ್ಣೆ ಕಾರ್ಖಾನೆಗಳನ್ನು ಮಿಳಿತಗೊಳಿಸಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿ (KSDL) ಮಾಡಲಾಯಿತು.’ಭಾರತದ ಭೌಗೋಳಿಕ ಸಂಕೇತ’ (GI) ಅಡಿಯಲ್ಲಿ KSDL ಈ ಸಾಬೂನಿನ ಬ್ರ್ಯಾಂಡ್ ಹೆಸರು ಬಳಸಲು, ಗುಣಮಟ್ಟದ ಕಾಪಾಡುವಿಕೆಗೆ, ನಕಲು ತಡೆಯುವಿಕೆ ಮತ್ತು ಅನಧಿಕೃತ ಬಳಕೆ ತಡೆಯುವಿಕೆ ಮಾಡಲು ಹಕ್ಕುಸ್ವಾಮ್ಯ ಹೊಂದಿದೆ.

ಇತಿಹಾಸ:

ಇಪ್ಪತ್ತನೇ ಶತಮಾನದ ಮೊದಲಲ್ಲಿ, ಮೈಸೂರು ರಾಜ್ಯವು ಜಗತ್ತಿನಲ್ಲಿ ದೊಡ್ಡಮಟ್ಟದ ಗಂಧದಮರ ಉತ್ಪಾದಕರಲ್ಲಿ ಒಂದಾಗಿತ್ತು. ಮರವನ್ನು ರಫ್ತು ಮಾಡುತ್ತಿತ್ತು. ಅದರಲ್ಲಿ ಹೆಚ್ಚಿನದು ಯುರೋಪಿಗೆ ರಫ್ತಾಗುತ್ತಿತ್ತು. ವಿಶ್ವಯುದ್ಧದ ಕಾರಣವಾಗಿ ರಫ್ತುಮಾಡಲು ಸಾಧ್ಯವಾಗದೇ ಇದ್ದಾಗ ಹೇರಳವಾದ ಗಂಧದಮರದ ದಾಸ್ತಾನು ಉಳಿಯಿತು. ಇದನ್ನು ಸದುಪಯೋಗಪಡಿಸಿಕೊಳ್ಳಲು ಮೈಸೂರಿನ ರಾಜ ನಾಲ್ವಡಿ ಕೃಷ್ಣರಾಜ ಒಡೆಯರರು ಸರ್ಕಾರಿ ಸಾಬೂನು ಕಾರ್ಖಾನೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಅದೇ ವರ್ಷ ಮೈಸೂರಿನಲ್ಲಿ ಗಂಧದ ಮರದಿಂದ ಎಣ್ಣೆ ತೆಗೆಯುವಂತಹ ಕಾರ್ಖಾನೆಯೂ ಸ್ಥಾಪಿಸಲ್ಪಟ್ಟಿತು. ಶ್ರೀ ಎಸ್.ಜಿ.ಶಾಸ್ತ್ರಿ ಇವರು ೧೯೧೬ರಲ್ಲಿ ಅಭಿವೃದ್ಧಿಪಡಿಸಿದ ಶ್ರೀಗಂಧದ ಸುಗಂಧ ದ್ರವ್ಯವು ಸಾಬೂನು ತಯಾರಿಕೆಗೆ ಮೂಲದ್ರವ್ಯವಾಗಿ ಪರಿಗಣಿಸಲ್ಪಟ್ಟು ಬಳಸಲ್ಪಟ್ಟಿತು. ಶ್ರೀಗಂಧದೆಣ್ಣೆಯ ಸುಗಂಧವನ್ನು ಪ್ರಮುಖ ದ್ರವ್ಯ ವಸ್ತುವಾಗಿ ಬಳಸಿ, ಮೈಸೂರು ಸ್ಯಾಂಡಲ್ ಸಾಬೂನನ್ನು ವಿಶಿಷ್ಟ ಆಕಾರ, ಕವಚದಲ್ಲಿ ತಯಾರಿಸಿ, ಪ್ರಪ್ರಥಮವಾಗಿ ೧೯೧೮ ರ ನವಂಬರ್ ಮಾಹೆಯಲ್ಲಿ ಮಾರುಕಟ್ಟೆಗೆ ಪರಿಚಯಸಲಾಯಿತು. ನಂತರ ೧೯೪೪ರಲ್ಲಿ ಶಿವಮೊಗ್ಗದಲ್ಲಿ ಶ್ರೀಗಂಧದೆಣ್ಣೆ ಕಾರ್ಖಾನೆಯನ್ನು ಸ್ಥಾಪಿಸಲಾಯಿತು. ಕರ್ನಾಟಕ ಏಕೀಕರಣದ ನಂತರ ಈ ಕಾರ್ಖಾನೆಗಳು ಕರ್ನಾಟಕ ಸರ್ಕಾರದ ಸುಪರ್ದಿಗೆ ಬಂದವು. ಈ ಎಲ್ಲಾ ಕಾರ್ಖಾನೆಗಳನ್ನು ಮಿಳಿತಗೊಳಿಸಿ ಸರ್ಕಾರಿ ಸಾಬೂನು ಕಾರ್ಖಾನೆಯನ್ನು ೧೯೮೦ನೇ ಇಸವಿಯಲ್ಲಿ ಕರ್ನಾಟಕ ರಾಜ್ಯಸರ್ಕಾರದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಯಾಗಿ ಪರಿವರ್ತಿಸಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಎಂದು ಪುನರ್ ನಾಮಕರಣ ಮಾಡಲಾಯಿತು. ತದನಂತರ ಸಾಬೂನಿನ ಹೊರತಾಗಿ, ಅಗರಬತ್ತಿ, ಮೈಪೌಡರ್, ಮಾರ್ಜಕಗಳು, ಶ್ರೀಗಂಧದೆಣ್ಣೆ, ಹಾಗೂ ಶ್ರೀಗಂಧದ ಕೊರಡು ಮುಂತಾದ ಉತ್ಪನ್ನಗಳ ತಯಾರಿಕೆ ಆರಂಭಿಸಿತು.