ಮೈಸೂರು ಗಂಜೀಫಾ | Mysuru Dasara 2019

ಗಂಜೀಫಾ – ಇದು ಇಸ್ಪೀಟ್ ಆಟವನ್ನು ಹೋಲುವಭಾರತದ ಒಂದು ಪ್ರಾಚೀನ ಆಟ. ೮-೧೦ ಶತಮಾನಗಳ ಹಿಂದೆ ಭಾರತದಲ್ಲಿ ಅಸ್ತಿತ್ವದಲ್ಲಿತ್ತು. ಮೂಲತಃ ಇದು ಪರ್ಷಿಯಾದಿಂದ ಬಂದು ಭಾರತದಲ್ಲಿ ಜನಪ್ರಿಯತೆಯನ್ನು ಪಡೆದುದಾಗಿದೆ.

೩ರಿಂದ ೩.೫ ಇಂಚು ವ್ಯಾಸವುಳ್ಳ ವೃತ್ತಾಕಾರದ ಎಲೆಗಳನ್ನು(ಕಾರ್ಡ್) ಇದಕ್ಕೆ ಉಪಯೋಗಿಸಲಾಗುತ್ತದೆ. ಒಂದು ಬದಿಯಲ್ಲಿ ಸಾಂಕೇತಿಕವಾಗಿ ಬರೆದ ಒಂದು ಚಿತ್ರವಿರುತ್ತಿತ್ತು. ಇನ್ನೊಂದು ಬದಿ ಖಾಲಿ. ಇದರಲ್ಲಿ ೯೬ – ೩೬೦ ಎಲೆಗಳನ್ನು ಬಳಸಿ ಆಡುವ ವಿವಿಧ ರೀತಿಯ ಆಟಗಳಿರುತ್ತಿದ್ದವು. ಆಟದ ಪದ್ಧತಿಗೆ ಹೊಂದಿಕೊಂಡು ಅದರ ಮೇಲೆ ಚಿತ್ರಗಳಿರುತ್ತವೆ. ಪೌರಾಣಿಕ ವ್ಯಕ್ತಿಗಳು, ಸಾಮಾಜಿಕ, ಹೆಣ್ಣು, ಹೂ, ಪ್ರಾಣಿಗಳು ಮುಂತಾದ ಚಿತ್ರಗಳನ್ನು ಚಿತ್ರಿಸಲಾಗಿರುತ್ತಿತ್ತು. ದಂತದಿಂದ ಮಾಡಿದ ಎಲೆಗಳನ್ನು ಆಟಕ್ಕೆ ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಮೊಗಲ್ ಚಕ್ರವರ್ತಿ ಬಾಬರ್ ೧೫೨೭ ರಲ್ಲಿ ದಂತದ ಎಲೆಗಳನ್ನು ಬಹುಮಾನವಾಗಿ ಕೊಟ್ಟನೆಂದು ಇತಿಹಾಸದಲ್ಲಿ ಉಲ್ಲೇಖವಿದೆ. ಮೊಗಲ್ ದೊರೆಗಳು ಗಂಜಿಫಾ ಎಂಬ ಎಲೆಗಳ ಆಟವನ್ನು ಜನಪ್ರಿಯಗೊಳಿಸಿದ್ದರು.