ಚಾಮುಂಡಿ ಬೆಟ್ಟ | Mysuru Dasara 2019

ಬೆಟ್ಟದ ಮೇಲ್ಭಾಗವನ್ನು ಹತ್ತನೆಯ ಶತಮಾನದ ಹೊತ್ತಿಗಾಗಲೇ ಪುಣ್ಯ ಕ್ಶೇತ್ರವೆಂದು ಪರಿಗಣಿಸಲಾಗಿತ್ತು. ಇಲ್ಲಿರುವ ಆ ಕಾಲದ ಶಾಸನಗಳಲ್ಲಿ ಇದನ್ನು ಮಬ್ಬೆಲದ ತೀರ್ಥ ಅಥವಾ ಮರ್ಬ್ಬಳದ ತೀರ್ಥ ಎಂದು ಕರೆದಿದೆ. ಇಲ್ಲಿ ಹಲವರು ಸಿದ್ಧಿ ಪಡೆದರೆಂದು ಶಾಸನಗಳು ತಿಳಿಸುತ್ತವೆ. ಈಗ ಇಲ್ಲಿರುವ ಮಹಾಬಲೇಶ್ವರ ದೇವಸ್ಥಾನ, ಹೊಯ್ಸಳ ವಿಷ್ಣುವರ್ಧನನ ಕಾಲಕ್ಕಿಂತ ಮುಂಚೆಯೇ ನಿರ್ಮಿತವಾಗಿತ್ತು. ವಿಷ್ಣುವರ್ಧನನ ಕಾಲದಲ್ಲಿ ೧೧೨೮ರಲ್ಲಿ ಈ ಮರ್ಬ್ಬಳದ ತೀರ್ಥಕ್ಕೆ ದತ್ತಿ ಬಿಟ್ಟಿದ್ದ ಬಗ್ಗೆ ಶಾಸನವಿದೆ.

ಭೂಮಿ ಅಸ್ತಿತ್ವಕ್ಕೆ ಬಂದದ್ದು ಸುಮಾರು ೮೫ ಲಕ್ಷ ವರ್ಷಗಳ ಹಿಂದೆ. ಇವತ್ತಿನ ಆಸ್ಟ್ರೇಲಿಯಾ, ಆಫ್ರಿಕಾ, ಭಾರತ ಭೂಖಂಡಗಳು ಒಟ್ಟಿಗೆ ಇದ್ದವು. ಇಂದಿಗೂ ನಕ್ಷೆಯಲ್ಲಿ ಈ ಭಾಗಗಳನ್ನು ಒಂದರ ಪಕ್ಕ ಒಂದು ಜೋಡಿಸಬಹುದಾಗಿದೆ. ಈ ಭೂಖಂಡಗಳು ಸರಿಯುತ್ತಾ ಇವೆ. ಭಾರತ ಭೂಖಂಡ ಚೀನಾ ಭಾಗದೊಂದಿಗೆ ಡಿಕ್ಕಿಯಾಗಿ, ಆ ಭಾಗದ ನೆಲ ಮೇಲಕ್ಕೇರಿತು. ಆಗ ರಚನೆ ಆದದ್ದೇ ಹಿಮಾಲಯ. ಇದು ಆದದ್ದು ೫-೬ ಲಕ್ಷ ವರ್ಷಗಳ ಹಿಂದೆ. ಹೀಗಾಗಿ ಚಾಮುಂಡಿ ಬೆಟ್ಟ ಹಿಮಾಲಯಕ್ಕಿಂತ ಹಳೆಯದು!

ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಮಹಿಷಾಸುರ ಮರ್ಧಿನಿಯನ್ನು ಮೈಸೂರು ಅರಸರು ಬೆಟ್ಟದ ತಾಯಿ ಚಾಮುಂಡೇಶ್ವರಿ ಎಂದು ಕರೆದು, ತಮ್ಮ ಕುಲದೇವತೆಯಾಗಿ ಪೂಜಿಸಿದರು ಎನ್ನುತ್ತದೆ ಇತಿಹಾಸ. ಅಂದಿನಿಂದ ಮರ್ಬಳ ತೀರ್ಥಕ್ಕೆ ಚಾಮುಂಡಿ ಬೆಟ್ಟ ಎಂಬ ಹೆಸರು ಬಂದಿರಬಹುದು ಎನ್ನುತ್ತಾರೆ ಇತಿಹಾಸ ತಜ್ಞರು.

16 ಅಡಿ ಎತ್ತರದ ಹೆಬ್ಬಂಡೆಯಲ್ಲಿ ಕಡೆಯಲಾಗಿರುವ ನಂದಿಯ ಸುಂದರ ಮೂರ್ತಿ ಬೆಟ್ಟದ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ನಂದಿಯ ಮೂರ್ತಿಯಲ್ಲಿ ಗಂಟೆಸರ, ಗೆಜ್ಜೆಸರಗಳನ್ನು, ಶಿಲ್ಪಿ ಸುಂದರವಾಗಿ ಕಡೆದಿದ್ದಾನೆ. ಬೆಟ್ಟದ ಮೇಲಿರುವ ಚಾಮುಂಡೇಶ್ವರಿಯ ಪುರಾತನ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಹಳೆಯ ದೇವಾಲಯವನ್ನು ಮುಮ್ಮಡಿ ಕೃಷ್ಣರಾಜ ಒಡೆಯರು ನವೀಕರಿಸಿ ಇದರ ಮಹಾದ್ವಾರಕ್ಕೆ ಒಂದು ಸುಂದರವಾದ ಗೋಪುರವನ್ನು ಕಟ್ಟಿಸಿದ್ದಾರೆ.ದೇವಾಲಯ ಇವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿತು.

ದ್ರಾವಿಡ ಶೈಲಿಯ ದೇವಾಲಯಗಳಂತೆ ಈ ದೇವಾಲಯದಲ್ಲೂ ಸುಕನಾಸಿ ಮತ್ತು ನವರಂಗಗಳಿವೆ. ನವರಂಗಗಳಿಗೆ ಹಾಕಿಸಿರುವ ಹಿತ್ತಾಳೆ ತಗಡುಗಳು, ಸಿಂಹವಾಸನ, ಹಲವು ವಾಹನಗಳು, ದೇವಿಯ ಸ್ತೋತ್ರವನ್ನೊಳಗೊಂಡ ನಕ್ಷತ್ರಮಾಲಿಕೆ ಮತ್ತು ಇತರ ಆಭರಣಗಳನ್ನು ರಾಜಮನೆತವರು ದೇವಿಗೆ ಸಮರ್ಪಿಸಿದ್ದಾರೆ.

ಪ್ರತಿವರ್ಷ ಆಶ್ವೀಜ ಶುದ್ಧ ಹುಣ್ಣಿಮೆಯಂದು ಚಾಮುಂಡೇಶ್ವರಿ ರಥೋತ್ಸವ ಜರುಗುತ್ತದೆ. ರಥೋತ್ಸವದ ಎರಡು ದಿನಗಳ ಬಳಿಕ ರಾತ್ರಿ ದೇವಾಲಯದ ಸಮೀಪದಲ್ಲೇ ಇರುವ ಕೊಳದಲ್ಲಿ ನಡೆಯುವ ತೆಪ್ಪೋತ್ಸವ ನೋಡಲು ದೇಶ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ.

ಬೆಟ್ಟ ಮೇಲೆ ಹೋಗಲು ಡಾಂಬರು ರಸ್ತೆಯೂ ಇದೆ, ನಗರ ಸಾರಿಗೆ ಸೌಲಭ್ಯವೂ ಇದೆ. ವಾಹನದಲ್ಲಿ ಬೆಟ್ಟಕ್ಕೆ ಹೋಗಿ ಇಳಿಯುತ್ತಿದ್ದಂತೆಯೇ ದೇವಾಲಯಕ್ಕೆ ಹೋಗುವ ದಾರಿಯಲ್ಲಿರುವ 12 ಅಡಿ ಎತ್ತರದ ಮಹಿಷಾಸುರನ ಬೃಹತ್ ಪ್ರತಿಮೆ ಪ್ರವಾಸಿಗರನ್ನು, ಭಕ್ತರನ್ನು ಸ್ವಾಗತಿಸುತ್ತದೆ. ಅಂಗಡಿಗಳ ಸಾಲಿನಲ್ಲಿ ಮುಂದೆ ಸಾಗಿದರೆ ಮಷಿಷಾಸುರನನ್ನೇ ಕೊಂದ ತಾಯಿ ಚಾಮುಂಡಿಯ ದರ್ಶನವೂ ದೊರಕುತ್ತದೆ.

ಭೇಟಿ ಸಮಯ ಮತ್ತು ಸಂಪರ್ಕ:

  • ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 2.00 ಮಧ್ಯಾಹ್ನ 3.30 ರಿಂದ ಸಂಜೆ 6.00 ಮತ್ತು ಸಂಜೆ 7:30 pm ರಿಂದ ರಾತ್ರಿ 9.00
  • ದೂರವಾಣಿ : 0821 – 2590027
  • ವೆಬ್ ಸೈಟ್ : ಇಲ್ಲಿ ಕ್ಲಿಕ್ ಮಾಡಿ 

ವಿಳಾಸ:

ಚಾಮುಂಡಿ ಬೆಟ್ಟ, ಮೈಸೂರು, ಕರ್ನಾಟಕ

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :

-ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :11.6 ಕಿಲೋ ಮೀಟರ್-ರೈಲ್ವೆ ನಿಲ್ದಾಣ ದಿಂದ :13ಕಿಲೋ ಮೀಟರ್-ವಿಮಾನ ನಿಲ್ದಾಣ ದಿಂದ :15.1ಕಿಲೋ ಮೀಟರ್