ಮಹದೇಶ್ವರ ಬೆಟ್ಟ | Mysuru Dasara 2019

ಮಹದೇಶ್ವರ ಬೆಟ್ಟ

ಕೊಳ್ಳೇಗಾಲಕ್ಕೆ ೮೦ ಕಿ ಮೀ ಹಾಗೂ ಮೈಸೂರಿನಿಂದ ೧೫೦ ಕಿ ಮೀ ದೂರದಲ್ಲಿರುವ ಬೆಟ್ಟ ಶ್ರೇಣಿಯೇ ಮಹದೇಶ್ವರ ಬೆಟ್ಟ. ಈ ಬೆಟ್ಟಗಳಿಗೆ ಮಾದೇಶ್ವರ ಬೆಟ್ಟ, ಮಾದೇಶನ ಬೆಟ್ಟ, ಮಹದೇಶ್ವರ ಗಿರಿ, ಎಂ ಎಂ ಹಿಲ್ಸ್ ಎಂಬ ಇತರೆ ಹೆಸರುಗಳಿವೆ. ಈ ಬೆಟ್ಟ ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳ.

ಈ ವಿಶಾಲ ಬೆಟ್ಟದ ಮೇಲೆ ಮಹದೇಶ್ವರ ಸ್ವಾಮಿ ದೇವಾಲಯವಿದೆ. ಬೆಟ್ಟ ಹತ್ತಲು ಸರ್ಪನದಾರಿ, ಬಸವನದಾರಿ ಎಂಬ ಎರಡು ಮಾರ್ಗಗಳಿವೆ. ಸ್ಥಳ ಪುರಾಣದ ಪ್ರಕಾರ ಈ ಬೆಟ್ಟಕ್ಕೆ ಸೇರಿದಂತೆ ಆನೆಮಲೆ, ಜೇನುಮಲೆ, ಕಾನುಮಲೆ, ಪಷ್ಷೆಮಲೆ, ಪವಳಮಲೆ, ಪೊನ್ನಾಚಿಮಲೆ, ಕೊಂಗುಮಲೆ ಎಂಬಾಗಿ ೭೭ ಮಲೆಗಳಿವೆ. ಈ ಪೈಕಿ ಮಹದೇಶ್ವರ ಬೆಟ್ಟದಲ್ಲಿ ಇರುವ ಶಿವ ದೇವಾಲಯವೇ ಪ್ರಧಾನವಾದದ್ದು. ಕುರುಬ ಗೌಡರ (ಹಾಲಮತ ಗೌಡರು) ಮನೆ ದೇವರು ಮತ್ತು ಕುಲದೈವ. ಗಿರಿಜನರ, ಸೋಲಿಗರ ಹಾಗೂ ಸುತ್ತಮುತ್ತಲ ಪ್ರದೇಶದ ಹಲವು ವಂಶಗಳ ಕುಲದೈವವಾಗಿ ಪೂಜಿಸಲ್ಪಡುವ ಮಹದೇಶ್ವರರು ೧೫ನೇ ಶತಮಾನದಲ್ಲಿ ಜೀವಿಸಿದ್ದರೆಂದು ಇತಿಹಾಸದಿಂದ ತಿಳಿದುಬರುತ್ತದೆ. ಲೋಕಕಲ್ಯಾಣಾರ್ಥ ದೇಶ ಸಂಚಾರ ಮಾಡಿ, ಹಲವರ ಸಂಕಷ್ಟ ಪರಿಹರಿಸಿದ ಪವಾಡಪುರುಷ ಮಹದೇಶ್ವರರು ಹರದನಹಳ್ಳಿ ಮಠದ ಮೂರನೇ ಮಠಾಧೀಶರಾಗಿದ್ದರೆಂದೂ ತಿಳಿದುಬರುತ್ತದೆ. ಜುನ್ಜೆ ಗೌಡ, ಶ್ರೀಮಂತ ಕುರುಬ ಗೌಡ, ಈ ದೇವಾಲಯವನ್ನು ಕಟ್ಟಿಸಿದವನು.

ಸುಮಾರು ೬೦೦ ವರ್ಷಗಳ ಹಿಂದೆ ಇಲ್ಲಿಗೆ ಬಂದ ಅವರು, ಬೆಟ್ಟದಲ್ಲಿ ನೆಲೆಸಿ ದೀರ್ಘಕಾಲ ತಪವನ್ನಾಚರಿಸಿದರೆಂದೂ, ತಮ್ಮ ದಿವ್ಯ ಹಾಗೂ ತಪಃಶಕ್ತಿಯಿಂದ ಜನರ ಕಷ್ಟವನ್ನು ನಿವಾರಿಸುತ್ತಿದ್ದರೆಂದೂ ಹೇಳಲಾಗುತ್ತದೆ. ಇಂದಿಗೂ ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಜನರ ನಂಬಿಕೆ. ಬೆಟ್ಟಗಳಿಂದಲೇ ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ ೧೫೦ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿದೆ.

ವಿಳಾಸ:

ಮಹದೇಶ್ವರ ಬೆಟ್ಟ, ಕರ್ನಾಟಕ