ನಾಗರಹೊಳೆ | Mysuru Dasara 2019

ಕರ್ನಾಟಕದ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ವಿರಾಜಪೇಟೆಯ ಆಗ್ನೇಯಕ್ಕೆ 61 ಕಿ.ಮೀ. ದೂರದಲ್ಲಿದೆ. ವಿರಾಜಪೇಟೆ ತಾಲ್ಲೂಕಿನ ಆಗ್ನೇಯದಲ್ಲಿ ಹುಟ್ಟಿ ಪೂರ್ವಕ್ಕೆ ಹರಿದು, ಮೈಸೂರು ಜಿಲ್ಲೆಯಲ್ಲಿ ಕಪಿಲಾನದಿಯನ್ನು ಸೇರುವ ನಾಗರಹೊಳೆಯಿಂದಾಗಿ ಇದಕ್ಕೆ ಈ ಹೆಸರು ಬಂದಿದೆ. ಕಲ್ಲಹಳ್ಳಿ, ತಿತ್ತಿಮತ್ತಿ, ನಾಗರಹೊಳೆ ಅರಣ್ಯಪ್ರದೇಶಗಳನ್ನು ಒಳಗೊಂಡಿದೆ. ಇದರ ಒಟ್ಟು ವಿಸ್ತೀರ್ಣ 288 ಚ.ಮೀ. ಇದು ಸಮುದ್ರ ಮಟ್ಟದಿಂದ ಸುಮಾರು 573 ಕಿ.ಮೀ. ಎತ್ತರದಲ್ಲಿದೆ. ಇದರ ದಕ್ಷಿಣದಲ್ಲಿ ಹೆಗ್ಗಡದೇವನಕೋಟೆ ತಾಲ್ಲೂಕಿನ ಕಾಕನಕೋಟೆ ಅರಣ್ಯವುಂಟು. ಇದರ ಉತ್ತರ ಭಾಗವೆಲ್ಲ ದಟ್ಟವಾದ ಅರಣ್ಯ ವೃಕ್ಷಗಳಿಂದ (ತೇಗ, ಬೀಟೆ, ಕರಿಮತ್ತಿ, ನಂದಿ, ಶ್ರೀಗಂಧ ಮುಂತಾದವು ಇಲ್ಲಿನ ಪ್ರಮುಖ ವೃಕ್ಷ ಜಾತಿಗಳು) ಕೂಡಿದೆಯಾದರೆ, ದಕ್ಷಿಣದಲ್ಲಿ ಕಾಡುಪ್ರಾಣಿಗಳಿಗೆ ಬೇಕಾಗುವ ಹುಲ್ಲುಗಾವಲು ಉಂಟು. ವರ್ಷದ ಬಹು ಪಾಲು ಎಲ್ಲ ಕಾಲಗಳಲ್ಲಿಯೂ ವನ್ಯಜೀವಿಗಳಿಗೆ ಇಲ್ಲಿ ಆಹಾರ ಸೌಲಭ್ಯವಿದೆ. ಹಾಗೇ ನೀರಿನ ಸೌಕರ್ಯವೂ ಪ್ರಾಣಿಗಳಿಗೆ ಪ್ರಿಯವಾದ ಉಪ್ಪುನೆಕ್ಕುಗಳೂ (ಸಾಲ್ಟ್ ಲಿಕ್ಸ್) ಇವೆ. ಈಗ ಇದಕ್ಕೆ ರಾಜೀವಗಾಂಧಿ ಅಭಯಾರಣ್ಯ ಎಂದು ಹೆಸರು ಕೊಡಲಾಗಿದೆ.

ಇಲ್ಲಿನ ವನ್ಯಪ್ರಾಣಿಗಳಲ್ಲಿ ಮುಖ್ಯವಾದವು ಹುಲಿ, ಚಿರತೆ, ಕರಡಿ, ಕಾಡು ನಾಯಿ, ಆನೆ, ಕಾಡೆಮ್ಮೆ, ಜಿಂಕೆ, ಕಾಡುಬೆಕ್ಕು, ಕೆಂಪು ಅಳಿಲು, ಹಾರುವ ಅಳಿಲು, ಕೋತಿ, ನರಿ, ಮುಂಗುಸಿ ಮುಂತಾದವು. ಕಾಕನಕೋಟೆಯ ಕಡೆ ಬಂದರೆ, ಅಪರೂಪದ ನಾಲ್ಕು ಕೊಂಬಿನ ಹುಲ್ಲೆ ಕಾಣದೊರೆಯುವುದು. ನಾಗರಹೊಳೆಯ ಪಕ್ಷಿ ಸಂಪತ್ತು ಕೂಡ ವೈವಿಧ್ಯಮಯ. ನವಿಲು, ಕಾಡು ಕೋಳಿ, ಗೌಜಲು, ಭೀಮರಾಜ, ಮರಕುಟಿಗ, ಪ್ಯಾರಡೈಸ್ ಫ್ಲೈ ಕ್ಯಾಚರ್, ಅರಷಿಣ ಬಣ್ಣದ ಕೊಕ್ಕುಳ್ಳ ಮಂಗಟ್ಟೆ (ಹಾರ್ನ್ ಬಿಲ್), ಕಾಮಾಲೆಹಕ್ಕಿ (ಓರಿಯೋಲ್), ಬಾಬಾಬುಡನ್ ಗಿಣಿ, ಬೆಟ್ಟದ ಗೊರವಂಕ (ಹಿಲ್ಮೈನ), ಬುಲ್ಬುಲ್, ಸೂರಕ್ಕಿ (ಸನ್ ಬರ್ಡ್) – ಇವು ಇಲ್ಲಿನ ಮುಖ್ಯ ಪಕ್ಷಿಗಳು. ಅಂತೆಯೇ ವಿವಿಧ ರೀತಿಯ ಹಾವುಗಳು (ಹೆಬ್ಬಾವು, ನಾಗರಹಾವು, ಕಾಳಿಂಗಸರ್ಪ ಇತ್ಯಾದಿ) ಇಲ್ಲಿ ಉಂಟು. ಇಲ್ಲಿನ ಪ್ರಾಣಿ ಸಂಪತ್ತನ್ನು ಹತ್ತಿರದಿಂದ ನೋಡುವ ಅನುಕೂಲತೆಗಾಗಿ ಎತ್ತರದ ವೀಕ್ಷಣ ಗೋಪುರಗಳನ್ನು ಕಟ್ಟಿದ್ದಾರಲ್ಲದೇ ಅಭಯಾರಣ್ಯವನ್ನು ಸುತ್ತುವ ಸಲುವಾಗಿ ವಾಹನ ಸೌಕರ್ಯವನ್ನೂ ಕಲ್ಪಿಸಲಾಗಿದೆ. ಸಾಕಿದ ಆನೆಗಳ ಮೇಲೆ ಪ್ರವಾಸಿಗರನ್ನು ಒಯ್ಯುವ ಅನುಕೂಲತೆಯೂ ಉಂಟು. ಹಾಗೇ ಇಲ್ಲಿ ಸುಸಜ್ಜಿತ ಪ್ರವಾಸಿ ಮಂದಿರ, ಪ್ರಾಣಿಗಳಿಗೆ ಸಂಬಂಧಿಸಿದ ಒಳ್ಳೆಯ ಗ್ರಂಥ ಭಂಡಾರವಿದೆ. ಇವೆಲ್ಲಾ ಕಾರಣಗಳಿಂದಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಬಲು ಜನಪ್ರಿಯ ತಾಣವಾಗಿದೆ.

ವಿಳಾಸ:

ಮೈಸೂರು - ಮಡಿಕೇರಿ ಆರ್ಡಿ, ಹುನ್ಸೂರ್, ಕರ್ನಾಟಕ 571201

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

-ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ : 89.2 ಕಿಲೋಮೀಟರ್-ರೈಲ್ವೆ ನಿಲ್ದಾಣ ದಿಂದ : 88 ಕಿಲೋಮೀಟರ್-ವಿಮಾನ ನಿಲ್ದಾಣ ದಿಂದ : 93 ಕಿಲೋ ಮೀಟರ್