ಶ್ರೀಮತಿ ಸುಧಾ ಮೂರ್ತಿ ರವರ ಬಗ್ಗೆ

ಮೈಸೂರು ದಸರಾ ೨೦೧೮ರ ಉದ್ಘಾಟಕರು – ಶ್ರೀಮತಿ ಸುಧಾ ಮೂರ್ತಿ

ಶ್ರೀಮತಿ ಸುಧಾ ಮೂರ್ತಿ ಯವರು 1950 ರಲ್ಲಿ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಯಲ್ಲಿ ಹುಟ್ಟಿದರು. ನಂತರ ಹುಬ್ಬಳ್ಳಿಯ BVB ಕಾಲೇಜಿನಿಂದ BE ಪದವಿಯನ್ನು ಪ್ರಥಮ ರ್ಯಾಂಕಿನಲ್ಲಿ ಪಡೆದರು. ಆಮೇಲೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ME ಪದವಿಯನ್ನು ಪಡೆದರು. ಪ್ರಸಿದ್ದವಾದ ಟಾಟಾ ಕಂಪನಿಯ ಟೆಲ್ಕೊ ದಲ್ಲಿ ಪ್ರಪ್ರಥಮ ಮಹಿಳಾ ಇಂಜಿನೀಯರ್ ಆಗಿ ನೇಮಕಗೊಂಡರು.
ತದನಂತರ ಬೆಂಗಳೂರಿನ ಕೆಲವು ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದ ಉಪಾಧ್ಯಾಯರಾಗಿ ಕೆಲಸ ಮಾಡಿದರು. ಪ್ರಸ್ತುತ: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಳೆದ ಇಪ್ಪತ್ತೆರಡು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಅನೇಕ ಸಮಾಜ ಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹನ್ನೊಂದು ನೈಸರ್ಗಿಕ ವಿಕೋಪದಂಥ ಕಠಿಣ ಪರಿಸ್ಥಿತಿಯಲ್ಲಿ ಬಡ ಜನರಿಗಾಗಿ ಕೆಲಸಮಾಡಿದ್ದಾರೆ. ಇದಲ್ಲದೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಾಹಿತ್ಯ ಸೇವೆಯನ್ನು ಮಾಡಿದ್ದಾರೆ. ಇವರು ಬರೆದ ಮೂವತ್ತು ಪುಸ್ತಕಗಳು ಎಲ್ಲಾ ಭಾರತೀಯ ಭಾಷೆಗೆ ಅನುವಾದಗೊಂಡಿವೆ. ಅದರಿಂದ ಸುಮಾರು ಇನ್ನೂರಕ್ಕೂ ಹೆಚ್ಚು ಶೀರ್ಷಿಕೆಗಳಾಗಿ ಅನೇಕ ಪುಸ್ತಕಗಳು ಹೊರಬಂದಿವೆ. ಸುಮಾರು ಇಪ್ಪತ್ತಾರು ಲಕ್ಷ ಪುಸ್ತಕಗಳು ಭಾರತಾದ್ಯಂತ ಮಾರಾಟವಾಗಿವೆ. ಇವರ ಸಾಹಿತ್ಯ ವಿವಿಧರಂಗದಲ್ಲಿದೆ. ಮಕ್ಕಳ ಸಾಹಿತ್ಯ, ಕಾದಂಬರಿ, ಪ್ರವಾಸ ಕಥನ, ಅನುಭವ ಕಥನ ಹಾಗೂ ತಾಂತ್ರಿಕ ರಂಗದಲ್ಲಿ ಮೂಡಿಬಂದಿವೆ.
ಇವರ ಕಲಸಕ್ಕಾಗಿ ಅನೇಕ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ಅವುಗಳಲ್ಲಿ ಮುಖ್ಯವಾಗಿರುವುದು R.K. ನಾರಾಯಣ್ ಪ್ರಶಸ್ತಿ, ಕ್ರಾಸ್ ವಲ್ರ್ದ್ ನ ಲೈಫ್ ಟೈಮ್ ಪ್ರಶಸ್ತಿ, ಕರ್ನಾಟಕ ಸರ್ಕಾರದ ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯ ಸರ್ಕಾರದ ರಾಜ್ಯ ಪ್ರಶಸ್ತಿ, ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಇದಲ್ಲದೇ ಇವರಿಗೆ ಏಳು ಗೌರವ ಡಾಕ್ಟರೇಟ್ ವಿವಿಧ ವಿಶ್ವವಿದ್ಯಾಲಯದಿಂದ ಸಂದಿವೆ. 10ನೇ ತರಗತಿಯ ವರೆಗೆ ಕನ್ನಡ ಮಾಧ್ಯಾಮದಲ್ಲಿಯೇ ಓದಿದ ಇವರಿಗೆ ಕನ್ನಡ ಎಂದರೆ ಪ್ರಪಂಚ, ಪಂಚಪ್ರಾಣ. ಕನ್ನಡದ ಪುಸ್ತಕಗಳನ್ನು ಅರವನ್ನು ಸಾವಿರ ಗ್ರಂಥಾಲಯಗಳಿಗೆ ಹಂಚಿದ್ದಾರೆ. ಸನ್ಮಾನ್ಯ ದಾರ್ಶನಿಕ ಡಿ.ವಿ.ಜಿ ಹೇಳುವಂತೆ
“ಹುಲ್ಲಾಗು ಬೆಟ್ಟದಡಿ
ಮನೆಗೆ ಮಲ್ಲಿಗೆಯಾಗು
ಕಲ್ಲಾಗು ವಿಧಿಕಷ್ಟಗಳ ಮಳೆ ಸುರಿಯೆ
ಬೆಲ್ಲ ಸಕ್ಕರೆಯಾಗಿ ದೀನ ದುರ್ಬಲರಿಗೆ
ಎಲ್ಲರೊಳು ಒಂದಾಗು ಮಂಕುತಿಮ್ಮ”
ಎನ್ನುವದೇ ಇವರ ಜೀವನ ಉದ್ದೇಶ.