ಮೈಸೂರು ದಸರಾ ಕ್ರೀಡಾಕೂಟ

ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ನಡೆಸಲಾಗುವ ದಸರಾ ಕ್ರೀಡಾಕೂಟ ತನ್ನದೇ ಆದ ಚಾಪು ಮೂಡಿಸಿದೆ. ಕ್ರೀಡಾ ಪ್ರತಿಭೆಗಳಿಗೆ ಸ್ಪೂರ್ತಿದಾಯಕವಾಗಲೆಂಬ ಸದುದ್ದೇಶದಿಂದ ದೇಶದ ಪ್ರಖ್ಯಾತ ಕ್ರೀಡಾತಾರೆಗಳಿಂದ ಕೂಟವನ್ನು ಉದ್ಘಾಟಿಸುವುದು ವಾಡಿಕೆ.

ಈ ಬಾರಿ ದೇಶದ ಗಮನ ಸೆಳೆದ ಭಾರತ ವನಿತೆಯರ ಕ್ರಿಕೇಟ್ ತಂಡದ ಯಶಸ್ವಿ ಕ್ರೀಡಾತಾರೆ, ಕನ್ನಡದ ಕುವರಿ ವೇದಾ ಕೃಷ್ಣಮೂರ್ತಿ ಅವರು ದಸರೆ ಕ್ರೀಡಾಕೂಟವನ್ನು ಸೆಪ್ಟಂಬರ್ ೨೧ ರಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಈ ಮೂಲಕ ನಾಡಿನ ಆಶಾದಾಯಕ ಕ್ರೀಡಾ ಪ್ರತಿಭೆಗಳಿಗೆ ಸ್ಪೂರ್ತಿದಾಯಕವಾಗಲಿದ್ದಾರೆ.

ಶುಕ್ರವಾರ ದಸರಾ ಕ್ರೀಡಾ ಉಪಸಮಿತಿಯ ಉಪವಿಶೇಷಾಧಿಕಾರಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ರವಿ.ಡಿ.ಚನ್ನಣ್ಣನವರ ಅವರ ನೇತ್ರತ್ವದಲ್ಲಿ ಸೆಸ್ಕ್ ಜೆನರಲ್ ಮ್ಯಾನೇಜರ್ ಸತೀಶ್ ಹಾಗೂ ಕಾರ್ಯಧ್ಯಕ್ಷರಾದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್ ಹಾಗೂ ಎಂ.ಎ. ಮಂಜುನಾಥ್ ಅವರುಗಳು ಅರಮನೆ ಮಂಡಳಿಯಲ್ಲಿ ಸಾಂಪ್ರದಾಯಿಕವಾಗಿ ಆಮಂತ್ರಣ ನೀಡಿದರು.

ವೇದ ಅವರು ಮಾತನಾಡಿ ಬಾಲ್ಯದಲ್ಲಿ ತಂದೆ ಜೊತೆಗೆ ಬಂದು ದಸರೆ ನೋಡಿದ್ದೆ ಆದರೆ ಈಗ ನಾಡಹಬ್ಬದಲ್ಲಿ ಮುಖ್ಯ ವೇದಿಕೆಯಲ್ಲಿ ಉದ್ಘಾಟನೆಗೆ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು.

ಭಾರತ ತಂಡದ ಮತ್ತೊಬ್ಬ ತಾರೆ ರಾಜೇಶ್ವರಿ ಗಾಯಕ್ವಾಡ್ ಅವರನ್ನು ಆಹ್ವಾನಿಸುತ್ತಿರುವುದಾಗಿ ಉಪಸಮಿತಿ ವಿಶೇಷಾಧಿಕಾರಿಗಳು ತಿಳಿಸಿದರು.

Leave a Reply

Your email address will not be published. Required fields are marked *