ನಿತ್ಯೋತ್ಸವ ಕವಿಗೆ ದಸರಾ ಸ್ವಾಗತ ಸಮಿತಿಯಿಂದ ಅಧಿಕೃತ ಆಹ್ವಾನ

ಸಾಂಸ್ಕೃತಿಕ ನಗರಿಯಲ್ಲಿ ವಿಶ್ವವಿಖ್ಯಾತ ದಸರಾ ಉದ್ಘಾಟನೆಯನ್ನು ನಿತ್ಯೋತ್ಸವ ಕವಿ ಪ್ರೊ.ನಿಸಾರ್ ಅಹ್ಮದ್ ನೆರವೇರಿಸಲಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ರಂದೀಪ್ ಡಿ. ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಎಂ.ಜೆ. ರವಿಕುಮಾರ್, ಹಾಗೂ ಸ್ವಾಗತ ಸಮಿತಿ ಸದಸ್ಯರು ಗುರುವಾರ ಬೆಂಗಳೂರಿನ ನಾಗರಬಾವಿಯಲ್ಲಿರುವ ಪ್ರೊ. ನಿಸಾರ್ ಅಹ್ಮದ್ ಅವರ ನಿವಾಸಕ್ಕೆ ತೆರಳಿ ಅವರನ್ನು ಅಧಿಕೃತವಾಗಿ ಆಹ್ವಾನಿಸಿದರು.

ಸೆ.21ರಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ದಸರಾ ಉದ್ಘಾಟನೆಯನ್ನು ತಾವು ನೆರವೇರಿಸಬೇಕೆಂದು ಪ್ರೊ.ನಿಸಾರ್ ಅವರ ಬಳಿ ಕೇಳಿಕೊಂಡರಲ್ಲದೇ, ಫಲತಾಂಬೂಲ ನೀಡಿ, ಶಾಲು ಹೊದೆಸಿ ಆಹ್ವಾನ ನೀಡಿದರು. ಇದೇ ಸಂದರ್ಭ ದಸರಾ ಉದ್ಘಾಟನೆಯನ್ನು ನೆರವೇರಿಸುತ್ತಿರುವುದಕ್ಕೆ ಪ್ರೊ.ನಿಸಾರ್ ಅಹ್ಮದ್ ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ.

ಬಾಲ್ಯದಲ್ಲಿರುವಾಗ ನಾಡಹಬ್ಬ ದಸರಾವನ್ನು ದೂರದಿಂದ ನೋಡುತ್ತಿದ್ದೆವು. ಆದರೆ ಈಗ ನಾಡಹಬ್ಬ ದಸರಾದ ಉದ್ಘಾಟನೆಯನ್ನು ನೆರವೇರಿಸುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದಿದ್ದಾರೆ.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್, ಮಹಾನಗರಪಾಲಿಕೆಯ ಹೆಚ್ಚುವರಿ ಆಯುಕ್ತ ಹಾಗೂ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎನ್. ರಾಜು, ಸ್ವಾಗತ ಸಮಿತಿ ಕಾರ್ಯದರ್ಶಿ ಟಿ. ಮಹೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪುಟ್ಟಶೇಷಗಿರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *