ಕೆ. ಎಸ್. ನಿಸಾರ್ ಅಹಮದ್ ರವರ ಬಗ್ಗೆ

ಮೈಸೂರು ದಸರಾ ೨೦೧೭ರ ಉದ್ಘಾಟಕರು – ಕೆ. ಎಸ್. ನಿಸಾರ್ ಅಹಮದ್

 • ಭೌತಿಕವಾಗಿ ಕಟ್ಟುವುದು ರಾಜ್ಯ ಸಾಂಸ್ಕೃತಿಕವಾಗಿ ಕಟ್ಟುವುದು ಸಾಮ್ರಾಜ್ಯ ಎಂಬ ವಿದ್ವಾಂಸರ ಅಭಿಮತದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಕರ್ನಾಟಕವನ್ನಾಳಿದ ಪ್ರತಿಯೊಂದು ರಾಜ ಮನೆತನವು ಕಟ್ಟಿರುವುದು ಸಾಮ್ರಾಜ್ಯವನ್ನೇ ಹೊರತು ಸಾಮಾನ್ಯ ರಾಜ್ಯವಲ್ಲ. ಭೌತಿಕವಾಗಿ ಕಟ್ಟುವುದು ರಾಜ್ಯ ಸಾಂಸ್ಕೃತಿಕವಾಗಿ ಕಟ್ಟುವುದು ಸಾಮ್ರಾಜ್ಯ ಎಂಬ ವಿದ್ವಾಂಸರ ಅಭಿಮತದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಕರ್ನಾಟಕವನ್ನಾಳಿದ ಪ್ರತಿಯೊಂದು ರಾಜ ಮನೆತನವು ಕಟ್ಟಿರುವುದು ಸಾಮ್ರಾಜ್ಯವನ್ನೇ ಹೊರತು ಸಾಮಾನ್ಯ ರಾಜ್ಯವಲ್ಲ.
 • ಕ್ರಿ.ಶ 1610 ರಿಂದಲೂ ಸಂಭ್ರಮ ಸಡಗರಗಳಿಂದ ಆಚರಣೆಗೊಳ್ಳುತ್ತಿರುವ ನಾಡ ಹಬ್ಬ ದಸರಾ ಇಂತಹ ಪರಂಪರೆಗಳಲ್ಲೊಂದು ಅದರಲ್ಲೂ  ದಸರಾ ಹತ್ತನೇ ದಿನದಂದು ನಡೆಯುವ ಜಂಬೂ ಸವಾರಿಯು ತನ್ನ ವೈಭವವೆಂಬ ‘ವಿಜಯ’ ದುಂದುಭಿಯನ್ನು ‘ದಶ’ ದಿಕ್ಕುಗಳಿಗೂ ನಾಲ್ಕು ಶತಮಾನಗಳಿಂದಲೂ ಪಸರಿಸುತ್ತಾ ಬಂದಿದೆ.
 •  ಹೀಗೆ ಹಿರಿದಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ನಾಡಹಬ್ಬ ದಸರಾವನ್ನು ಕನ್ನಡ ಸಾರಸ್ವತ ಲೋಕದ ಹಿರಿಯ ಕವಿ ಕೆ.ಎಸ್.ನಿಸಾರ್ ಅಹಮದ್ ಅವರು ಉದ್ಘಾಟಿಸುತ್ತಿರುವುದು ಸಂತಸದ ವಿಷಯ.
 • ಕೊಕ್ಕರೆಹೊಸಹಳ್ಳಿ ಶೇಖ ಹೈದರ ನಿಸಾರ ಅಹಮದ್, ನಿತ್ಯೋತ್ಸವ ಕವಿ ಎಂತಲೇ ಕನ್ನಡ ಸಾರಸ್ವತ ಲೋಕದ ಪರಿಚಿತರು. ವೃತ್ತಿಯಲ್ಲಿ ಭೂ ವಿಜ್ಞಾನದ ಅಧ್ಯಾಪಕರಾದ ಇವರು ಪ್ರವೃತ್ತಿಯಲ್ಲಿ ಕನ್ನಡ ಸಾಹಿತ್ಯ ಸರಸ್ವತಿಗೆ ತಮ್ಮ ಕವಿತೆಗಳ ಮೂಲಕ ನಿತ್ಯ ಪುಷ್ಪ ವೃಷ್ಠಿಗೆರೆದ ಕರ್ನಾಟಕದ ಹೆಮ್ಮೆಯ ಕವಿ ನಿಸಾರರ “ಜೋಗದ ಸಿರಿ ಬೆಳಕಿ”ನಲ್ಲಿ ಪ್ರತಿಯೊಬ್ಬ ಕನ್ನಡಿಗರ ಎದೆ ತಟ್ಟಿದೆ.
 • ನಿಸಾರರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರವರಿ 5, 1936ರಲ್ಲಿ ಜನಿಸಿದರು. ಇವರ ತಂದೆ ಕೆ.ಎಸ್. ಹೈದರ್, ತಾಯಿ ಷಾನ್‍ವಾಜ್ ಬೇಗಂ. ತಂದೆ ಸರ್ಕಾರಿ ನೌಕರಿಯಲ್ಲಿದ್ದು, ಕನ್ನಡ, ಇಂಗ್ಲೀಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ನಿಸಾರರರು ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು, ದೇವನಹಳ್ಳಿಯಲ್ಲಿ ಪ್ರೌಢಶಾಲೆಯನ್ನು ಹೊಸಕೋಟೆ ಹೈಸ್ಕೂಲಿನಲ್ಲಿ, ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್ ಪದವಿಯನ್ನು ಪಡೆದರು.
 • ಸಾಹಿತ್ಯ ಲೋಕದಲ್ಲಿ ನವೋದಯ-ನವ್ಯ ಪರಂಪರೆ ಎರಡರಲ್ಲೂ ಇವರು ಗುರುತಿಸಿಕೊಂಡಿದ್ದಾರೆ. ಮನಸ್ಸು ಗಾಂಧಿ ಬಜಾರು, ನೆನೆದವರ ಮನದಲ್ಲಿ ಸುಮುಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು ಇವರ ಕವನ ಸಂಕಲನಗಳು. ಇದು ಬರೀ ಬೆಡಗಲ್ಲೋ ಅಣ್ಣ, ಮನದೊಂದಿಗೆ ಮಾತುಕಥೆ, ಅಚ್ಚು-ಮೆಚ್ಚು. ವಿಚಾರ ವಿಹಾರ, ಸ-ರಸೋಕ್ತಿಗಳ ಸಂಗಾತಿ ಇವರ ವಿಮರ್ಶಾ ಬರಹಗಳು. ಸರ್ ಮೊಹಮ್ಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಗೀತೆಯನ್ನು ಕನ್ನಡಕ್ಕೆ ‘ಭಾರತವು ನಮ್ಮ ದೇಶ’ ಎಂದು ಭಾಷಾಂತರಿಸಿರುವ ಇವರು ಭಾಷಾಂತರಕಾರರೂ ಹೌದು. ನವಕರ್ನಾಟಕ ವಿಶ್ವ ಕಥಾಕೋಶಕ್ಕೆ ಹೆಜ್ಜೆ ಗುರುತುಗಳು ಕಥಾ ಸಂಕಲನವನ್ನು ಅನುವಾದಿಸಿದ್ದಾರೆ. ಷೇಕ್ಸ್‍ಪಿಯರ್‍ನ ಒಥೆಲ್ಲೊ, ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ನಾಟಕಗಳನ್ನು ಕನ್ನಡೀಕರಿಸಿದ್ದಾರೆ.
 • ತಮ್ಮ ಸಾಹಿತ್ಯ ಕೃಷಿಯ ಮೂಲಕ ಕನ್ನಡ ನಾಡಿನಲ್ಲಿ “ನಿತ್ಯೋತ್ಸವ ಕವಿ” ಎಂದೇ ಪ್ರಖ್ಯಾತರಾಗಿದ್ದಾರೆ.
 • ಕರ್ನಾಟಕ ಸುಗಮ ಸಂಗೀತದ ಬ್ರಹ್ಮ ಮೈಸೂರು ಅನಂತಸ್ವಾಮಿ ಅವರ ಸಂಗೀತ ಸಂಯೋಜನೆಯಲ್ಲಿ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಭಾವಗೀತೆಯ ಕ್ಯಾಸೆಟ್ ತಂದ ಕೀರ್ತಿ ಇವರದ್ದಾಗಿದೆ. ನಿತ್ಯೋತ್ಸವ, ಸುಶ್ರಾವ್ಯ, ನಮೋಲ್ಲಾಸ, ಸುಮಧುರ ಅಪೂರ್ವ ಹೊಂಬೆಳಕು ಕ್ಯಾಸೆಟ್‍ಗಳ ಬಿಡುಗಡೆ ಮಾಡಿದ್ದಾರೆ.
 • 2008 ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಗೌರವ, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಅರಸು ಪ್ರಶಸ್ತಿ, 2003ರಲ್ಲಿ ಹಂಪಿ ವಿಶ್ವವಿದ್ಯಾಲಯದ ನಾಡೋಜ ಗೌರವ ಇವರಿಗೆ ಸಂದಿವೆ. ಶ್ರೀಯುತರು 2006ರ ಡಿಸೆಂಬರ್ ನಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
 • ಹೀಗೆ ಹತ್ತು ಹಲವು ಹಿರಿಮೆ ಹೊಂದಿರುವ ನಾಡಿನ ಪ್ರಸಿದ್ದ ಕವಿ ಶ್ರೀ ಕೆ.ಎಸ್. ನಿಸಾರ್ ಅಹಮದ್‍ರವರು ಧರ್ಮ, ಭಾಷೆ,ನದಿ,ಗಡಿಗಳ ಎಲ್ಲೆ ಮೀರಿ ಸಾಹಿತ್ಯ ಲೋಕದ ಕಣ್ಮಣಿಯಾಗಿರುತ್ತಾರೆ.
 • ಹೀಗೆ ಹಿರಿದಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ನಾಡಹಬ್ಬ ದಸರಾವನ್ನು ಕನ್ನಡ ಸಾರಸ್ವತ ಲೋಕದ ಹಿರಿಯ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಉದ್ಘಾಟಿಸುತ್ತಿದ್ದಾರೆ.