ಗಜಪಯಣ

 

ಜಗತ್ ಪ್ರಸಿದ್ಧ ಮೈಸೂರು ದಸರಾ ಆಚರಣೆಯಲ್ಲಿ ಭಾಗವಹಿಸಲು, ಕಾಡುಗಳಿಂದ ಮೈಸೂರು ಅರಮನೆಗೆ ಸಾಗುವ ಆನೆಗಳ ಭವ್ಯ ಪಥಸಂಚಲನವನ್ನು ಗಜಪಯಣ ಎಂದು ಕರೆಯುತ್ತಾರೆ. ಗಜಪಯಣವು ದಸರಾ ಉತ್ಸವಕ್ಕೆ ಕ್ಷಣಗಣನೆಯನ್ನು ಗುರುತಿಸುತ್ತದೆ.ಈ ಬಾರಿ, ಗಜಪಯಣವು ಸೆಪ್ಟೆಂಬರ್ 7ಕ್ಕೆ ಶುರುವಾಗಿ ಆನೆಗಳು ಅರಮನೆಯನ್ನು ಸೆಪ್ಟೆಂಬರ್ 10ಕ್ಕೆ ತಲುಪಿದವು.

ಮೈಸೂರು ಮಹಾರಾಜರು ಗಜಪಯಣದ ಈ ಸಂಪ್ರದಾಯವನ್ನು ಆರಂಭಿಸಿದರು. ಆಗ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳು ತಮ್ಮ ಅರಣ್ಯ ನೆಲೆಗಳಿಂದ ಹೊರಟು ಸಂಪೂರ್ಣ ಮಾರ್ಗವನ್ನು ನಡೆದುಕೊಂಡೇ ಮೈಸೂರಿಗೆ ಬಂದು ಸೇರುತ್ತಿದ್ದವು. ಮಹಾರಾಜರು ಸ್ವತಃ ತಾವೇ ಆನೆಗಳ ಪೂಜೆ ಮಾಡುವ ಮೂಲಕ ಗಜಪಯಣವನ್ನು ಆರಂಭಿಸುತ್ತಿದ್ದರು. ಹತ್ತಿರದ ಹಳ್ಳಿಗರು ತಮ್ಮ ಬುಡಕಟ್ಟು ಅಥವಾ ಜಾನಪದ ನೃತ್ಯ, ಸಂಗೀತ ಮತ್ತು ಹಾಡುಗಳಿಂದ ಸಮಾರಂಭದ ರಂಗೇರಿಸುತ್ತಿದ್ದರು. ಮಾರ್ಗದುದ್ದಕ್ಕೂ ಗ್ರಾಮಸ್ಥರು ಆನೆಗಳನ್ನು ಉತ್ಸಾಹದಿಂದ ಸ್ವಾಗತಿಸಿ ಅವುಗಳಿಗೆ ತಿನಿಸುಗಳನ್ನು ನೀಡುತ್ತಿದ್ದರು. ಆನೆಗಳು ಅರಮನೆಯ ಮುಖ್ಯದ್ವಾರ ತಲುಪುತ್ತಿದ್ದಂತೆಯೇ ಅವುಗಳಿಗೆ ಒಂದು ಆಡಂಭರದ ವೈಭವೋಕ್ತ ಸ್ವಾಗತವನ್ನು ನೀಡಲಾಗುತ್ತಿತ್ತು. ಅಂದಿನಿಂದ, ಅಂತಿಮ ದಿನದ ದಸರಾ ಮೆರವಣಿಗೆಗಾಗಿ ಆನೆಗಳಿಗೆ ತರಬೇತಿ ನೀಡಲಾಗುತ್ತಿತ್ತು.

ಅಂದಿನ ಗಜಪಯಣಕ್ಕೂ ಈಗಿನದಕ್ಕೂ ಹೋಲಿಸಿದರೆ ಹೆಚ್ಚಿನ ವ್ಯತ್ಯಾಸಗಳೇನಿಲ್ಲ. ಈಗ, ನಮ್ಮ ರಾಜಕೀಯ ನಾಯಕರು ಆನೆಗಳ ಪೂಜೆ ಮಾಡಿ ಗಜಪಯಣವನ್ನು ಪ್ರಾರಂಭಿಸುತ್ತಾರೆ. ಜೊತೆಗೆ, ಸಂಪೂರ್ಣ ಮಾರ್ಗವನ್ನು ನಡೆಸುವ ಬದಲು ಆನೆಗಳನ್ನು ಸ್ವಲ್ಪ ದಾರಿ ಮಾತ್ರ ನಡೆಸಿ ಆಮೇಲೆ ಲಾರಿಗಳಲ್ಲಿ ಅವುಗಳನ್ನು ಮೈಸೂರಿಗೆ ತರಲಾಗುತ್ತದೆ. ಇದರಿಂದ ಆನೆಗಳಿಗೆ ಹೆಚ್ಚು ಸುಸ್ತು ಅಥವಾ ಆಯಾಸ ಆಗುವುದಿಲ್ಲ.

ಅರಮನೆಗೆ ತಲುಪಿದ ನಂತರ ಆನೆಗಳಿಗೆ ದಸರಾ ಮುಗಿಯುವವರೆಗೂ ಅವು ತಮ್ಮ ಅರಣ್ಯ ಶಿಬಿರಗಳಲ್ಲಿ ತಿನ್ನುತ್ತಿದ್ದ ಆಹಾರದ ಬದಲಿಗೆ ಇಲ್ಲಿ ವಿಶೇಷವಾದ ಪೌಷ್ಠಿಕಭರಿತ ಆಹಾರವನ್ನು ನೀಡಲಾಗುತ್ತದೆ. ಇದು ಸಸಾರಜನಕ, ಜೀವಸತ್ವ ತುಂಬಿರುವ ಹೆಚ್ಚು ಕ್ಯಾಲೋರೀ ಉಳ್ಳ ಆಹಾರವಾಗಿರುತ್ತದೆ. ಆನೆಗಳನ್ನು ಕೊನೆಯ ದಿನದ ಮೆರವಣಿಗೆಗಾಗಿ  ಬಲಿಷ್ಠವಾಗಿ ಇಡಲೆಂದು ಹೀಗೆ ಮಾಡಲಾಗುತ್ತದೆ. ಜೊತೆಗೆ ನಗರದ ವಿಭಿನ್ನವಾದ ಜೀವನಶೈಲಿಗೆ ಆನೆಗಳು ಹೊಂದುಕೊಳ್ಳುವಂತೆ ಅವುಗಳಿಗೆ ತರಬೇತಿ ನೀಡಲಾಗುತ್ತದೆ. ನಗರದ ಹಲವಾರು ಬೀದಿಗಳಲ್ಲಿ ಆನೆಗಳನ್ನು ಕರೆದುಕೊಂಡು ಹೋಗಿ ಅವುಗಳಿಗೆ ನಗರದ ಜನಸಮೂಹ, ವಾಹನ ಸಂಚಾರಗಳ ಪರಿಚಯ ಮಾಡಿಕೊಡಲಾಗುತ್ತದೆ. ಇದರಿಂದ ಕೊನೆಯ ದಿನದಂದು ಮೆರವಣಿಗೆ ನೋಡಲು ಬರುವ ಸಹಸ್ರಾರು ಜನರನ್ನು ನೋಡಿದರೂ, ಅವರ ಗದ್ದಲವನ್ನು ಕೇಳಿದರೂ ಅವುಗಳು ಹೆದರದೆ ಶಾಂತವಾಗಿ ಮೆರವಣಿಗೆಯಲ್ಲಿ ನಡೆಯಲು ಸಹಾಯವಾಗುತ್ತದೆ.

ಗಜಪಯಣವು ಸಾಮಾನ್ಯವಾಗಿ ಮೈಸೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿ, ನಾಗರಹೊಳೆ ಅರಣ್ಯದ ಹೊರವಲಯದಲ್ಲಿರುವ ವೀರನ ಹೊಸಳ್ಳಿ ಶಿಬಿರದಲ್ಲಿ ಪ್ರಾರಂಭವಾಗುತ್ತದೆ. ಅಲ್ಲಿಯವರೆಗೆ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳನ್ನು ದುಬ್ಬಾರೆ, ಹೆಬ್ಬಾಳೆ, ಮೂರ್ಕಲ್, ಕಲ್ಲಾಳ, ನಾಗರಹೊಳೆ, ವೀರನ ಹೊಸಳ್ಳಿ, ಮೇಟಿಕುಪ್ಪೆ, ಸುಂಕದಕಟ್ಟೆ, ಬಂಡೀಪುರ, ಮೂಲೆಹೊಳೆ, ಕೆ.ಗುಡಿ ಮತ್ತು ಭೀಮೇಶ್ವರಿಯಲ್ಲಿರುವ ಆನೆ ಶಿಬಿರಗಳಲ್ಲಿ ಇರಿಸಲಾಗುತ್ತದೆ.

 ಈ ಬಾರಿಯ ಗಜ ಪಯಣದ ಫೋಟೋಗಳನ್ನು ಇಲ್ಲಿ ವೀಕ್ಷಿಸಿ.


 

ದಸರಾ ಆನೆಗಳ ವಿವರ

 

ಹೆಸರು ಮಾಹಿತಿ ಗುಣಲಕ್ಷಣಗಳು
ಬಲರಾಮ ಗಂಡು, ವಯಸ್ಸು: 54, ಎತ್ತರ: 2.7ಮೀ., ಉದ್ದ: 3.77 ಮೀ., ತೂಕ (ಅಂದಾಜು): 4900 ಕೆ.ಜಿ, ಆನೆ ಶಿಬಿರ: ತಿತ್ತಿಮತ್ತಿ ಆನೆ ಶಿಬಿರ.
ಕೊಡಗು ಜಿಲ್ಲೆಯ ಕಟ್ಟೆಪುರ ಕಾಡಿನಲ್ಲಿ 1987 ರಲ್ಲಿ ಸೆರೆಹಿಡಿಯಲಾಗಿತ್ತು. ತುಂಬಾ ಸೌಮ್ಯ ಮತ್ತು ಮೃದು ಸ್ವಭಾವದ ಆನೆ. ಈಗಾಗಲೇ ಅಂಬಾರಿಯನ್ನು 13 ಬಾರಿ ಹೊತ್ತಿದೆ. ಬಹಳ ಬಲಿಷ್ಠವಾದ ಈ ಆನೆ 17 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದೆ.
ಅರ್ಜುನ ಗಂಡು, ವಯಸ್ಸು: 52, ಎತ್ತರ: 2.80ಮೀ., ತೂಕ (ಅಂದಾಜು): 4750 ಕೆ.ಜಿ, ಆನೆ ಶಿಬಿರ: ಬಲ್ಲೆ ಆನೆ ಶಿಬಿರ. 1968 ರಲ್ಲಿ ಸೆರೆಹಿಡಿಯಲಾಗಿತ್ತು. ಒಂದು ಬಾರಿ ಅಂಬಾರಿಯನ್ನು ಹೊತ್ತಿದೆ.
ಗೋಪಾಲಸ್ವಾಮಿ ಗಂಡು, ವಯಸ್ಸು: 30, ಎತ್ತರ: 2.62ಮೀ., ಉದ್ದ: 3.42 ಮೀ., ತೂಕ (ಅಂದಾಜು): 3240 ಕೆ.ಜಿ, ಆನೆ ಶಿಬಿರ: ತಿತ್ತಿಮತ್ತಿ ಆನೆ ಶಿಬಿರ.
2009 ರಲ್ಲಿ ಸಕಲೇಶಪುರದ ಹೆತ್ತೂರಿನಲ್ಲಿ ಸೆರೆ ಹಿಡಿಯಲಾಗಿತ್ತು. ಮೊದಲನೇ ಬಾರಿಗೆ ದಸರಾದಲ್ಲಿ ಭಾಗವಹಿಸಲಿದೆ.
ಗಜೇಂದ್ರ ಗಂಡು, ವಯಸ್ಸು: 57, ಎತ್ತರ: 2.84ಮೀ., ತೂಕ (ಅಂದಾಜು): 4570 ಕೆ.ಜಿ, ಆನೆ ಶಿಬಿರ: ಕೆ.ಗುಡಿ ಆನೆ ಶಿಬಿರ. 1987 ರಲ್ಲಿ ಸೆರೆಹಿಡಿಯಲಾಗಿತ್ತು. ಬೇರೆ ಆನೆಗಳನ್ನು ಸೆರೆ ಹಿಡಿದು ಪಳಗಿಸುವಲ್ಲಿ ಪರಿಣತಿ ಪಡೆದಿದೆ.  16 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದೆ.
ಅಭಿಮನ್ಯು ಗಂಡು, ವಯಸ್ಸು: 46, ಎತ್ತರ: 2.68ಮೀ., ತೂಕ (ಅಂದಾಜು): 4270 ಕೆ.ಜಿ, ಆನೆ ಶಿಬಿರ: ಮೂರ್ಕಲ್ ಆನೆ ಶಿಬಿರ. 1977 ರಲ್ಲಿ ಸೆರೆಹಿಡಿಯಲಾಗಿತ್ತು. ಬೇರೆ ಆನೆಗಳನ್ನು ಸೆರೆ ಹಿಡಿದು ಪಳಗಿಸುವಲ್ಲಿ ಹಾಗು ವೈದ್ಯಕೀಯ ನೆರವು ಒದಗಿಸುವಲ್ಲಿ ಪರಿಣತಿ ಪಡೆದಿದೆ. 14 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದ್ದು ಅರಮನೆ ಸಂಗೀತ ವಾದ್ಯಗಳ ಸಾರೋಟನ್ನು ಎಳೆಯುತ್ತದೆ.
ಕಾಂತಿ ಹೆಣ್ಣು, ವಯಸ್ಸು: 72, ತೂಕ (ಅಂದಾಜು): 3290 ಕೆ.ಜಿ, ಆನೆ ಶಿಬಿರ: ಕೆ.ಗುಡಿ ಆನೆ ಶಿಬಿರ. 1968 ರಲ್ಲಿ ಸೆರೆಹಿಡಿಯಲಾಗಿತ್ತು. ಅತ್ಯಂತ ಶಾಂತಿಯುತ ಮತ್ತು ಮೃದು ಸ್ವಭಾವ ಹೊಂದಿದೆ. 9 ನೇ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿದೆ.
ವರಲಕ್ಷ್ಮಿ ಹೆಣ್ಣು, ವಯಸ್ಸು: 57, ಎತ್ತರ: 2.29ಮೀ., ತೂಕ (ಅಂದಾಜು): 3090 ಕೆ.ಜಿ, ಆನೆ ಶಿಬಿರ: ಸುಂಕದಕಟ್ಟೆ ಆನೆ ಶಿಬಿರ. 1977 ರಲ್ಲಿ ಸೆರೆಹಿಡಿಯಲಾಗಿತ್ತು. ಅತ್ಯಂತ ಶಾಂತಿಯುತ ಮತ್ತು ಮೃದು ಸ್ವಭಾವ ಹೊಂದಿದೆ. 9 ನೇ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿದೆ.
ಶ್ರೀರಾಮ ಗಂಡು, ವಯಸ್ಸು: 55, ತೂಕ (ಅಂದಾಜು): 4300 ಕೆ.ಜಿ, ಆನೆ ಶಿಬಿರ:  ಕೆ.ಗುಡಿ ಆನೆ ಶಿಬಿರ.
1968 ರಲ್ಲಿ ಸೆರೆಹಿಡಿಯಲಾಗಿತ್ತು. ಅತ್ಯಂತ ಧೈರ್ಯವಂತ ಮತ್ತು ಬಲಿಷ್ಠವಾದ ಆನೆ. 15 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದ್ದು ಅರಮನೆಯ ಎಲ್ಲಾ ಪೂಜಾ ವಿಧಾನಗಳಲ್ಲಿ ಭಾಗವಹಿಸುತ್ತದೆ.
 ಸರಳ ಹೆಣ್ಣು, ವಯಸ್ಸು: 70, ಎತ್ತರ: 2.46ಮೀ., ತೂಕ (ಅಂದಾಜು): 3250 ಕೆ.ಜಿ, ಆನೆ ಶಿಬಿರ: ಸುಂಕದಕಟ್ಟೆ ಆನೆ ಶಿಬಿರ. 1968 ರಲ್ಲಿ ಸೆರೆಹಿಡಿಯಲಾಗಿತ್ತು. 13 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತದೆ.
ವಿಕ್ರಮ ಗಂಡು, ವಯಸ್ಸು: 40, ತೂಕ (ಅಂದಾಜು): 3820 ಕೆ.ಜಿ, ಆನೆ ಶಿಬಿರ:  ದುಬ್ಬಾರೆ ಆನೆ ಶಿಬಿರ.  1990 ರಲ್ಲಿ ಸೆರೆಹಿಡಿಯಲಾಗಿತ್ತು. 11 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತದೆ.
ಕವಿತ ಹೆಣ್ಣು, ವಯಸ್ಸು: 70, ತೂಕ (ಅಂದಾಜು): 3290 ಕೆ.ಜಿ, ಆನೆ ಶಿಬಿರ:  ಕೆ.ಗುಡಿ ಆನೆ ಶಿಬಿರ. 1968 ರಲ್ಲಿ ಸೆರೆಹಿಡಿಯಲಾಗಿತ್ತು. ಅತ್ಯಂತ ಶಾಂತಿಯುತ ಮತ್ತು ಮೃದು ಸ್ವಭಾವ ಹೊಂದಿದೆ. 9 ನೇ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿದೆ.
ಹರ್ಷ ಗಂಡು, ವಯಸ್ಸು: 46, ತೂಕ (ಅಂದಾಜು): 3290 ಕೆ.ಜಿ, ಆನೆ ಶಿಬಿರ:  ದುಬ್ಬಾರೆ ಆನೆ ಶಿಬಿರ. 1990 ರಲ್ಲಿ ಸೆರೆಹಿಡಿಯಲಾಗಿತ್ತು. ಅತ್ಯಂತ ಬಲಿಷ್ಠ ಆನೆ. 13 ನೇ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿದೆ.
ಮೇರಿ ಹೆಣ್ಣು, ವಯಸ್ಸು: 56, ತೂಕ (ಅಂದಾಜು): 3180 ಕೆ.ಜಿ, ಆನೆ ಶಿಬಿರ: ಸುಂಕದಕಟ್ಟೆ ಆನೆ ಶಿಬಿರ. 1977 ರಲ್ಲಿ ಸೆರೆಹಿಡಿಯಲಾಗಿತ್ತು. ಮೃದು ಸ್ವಭಾವ ಹೊಂದಿದೆ. ಹಿಂದೆ ಕಾಡುಗಳಲ್ಲಿ ಮತ್ತು ಇತರೆ ಮೆರವಣಿಗೆಗಳಲ್ಲಿ ಮರಗೆಲಸಗಳಿಗೆ ಬಳಸಲಾಗುತ್ತಿತ್ತು. ಇದುವರೆಗೂ, ದಸರಾದಲ್ಲಿ 10 ಬಾರಿ ಮೆರವಣಿಗೆಯಲ್ಲಿ ಪಟ್ಟದಾನೆ ಪಕ್ಕ ಇದು ನಡೆದಿದೆ.

 

 

Wordpress Themes - Wordpress Video Themes - Wordpress Travel Themes - WordPress Restaurant Themes